ಮಡಿಕೇರಿ ಏ.20 : ಮನೆಯಲ್ಲೆ ಮತದಾನ ಮಾಡಲು ಇಚ್ಛಿಸಿರುವ ಹಿರಿಯ ನಾಗರಿಕರಿಗೆ ಪೂರ್ವ ಸೂಚನೆ ನೀಡಿ, ಇದೇ ಏ.29 ರಿಂದ ಮೇ6 ರ ಒಳಗಾಗಿ, ಅವರಿರುವ ಮನೆಗಳಿಗೆ ಇಬ್ಬರು ಪೋಲಿಂಗ್ ಅಧಿಕಾರಿಗಳು ಮತ್ತು ಸೆಕ್ಟರ್ ಅಧಿಕಾರಿಗಳು ತೆರಳಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮತಗಟ್ಟೆಗೆ ತೆರಳಲು ಸಾಧ್ಯವಾಗದೆ ಇರುವಂತದ 12,836 ಹಿರಿಯ ನಾಗರಿಕರಿಗೆ ಮತದಾನಕ್ಕಾಗಿ ಫಾರಂ ನಂ.12 ಡಿಯನ್ನು ಒದಗಿಸಲಾಗಿದೆ. ಇದರಲ್ಲಿ 2475 ಹಿರಿಯ ನಾಗರಿಕರು ಫಾರಂಗಳನ್ನು ಭರ್ತಿ ಮಾಡಿ ಒದಗಿಸಿರುವುದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರ ಮುಕ್ತಾಯವಾಗಿದ್ದು, ಕೊಡಗಿನ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಒಟ್ಟು 32 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು 31 ನಾಮಪತ್ರಗಳನ್ನು ಮತ್ತು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು 12 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನಾ ಕಾರ್ಯ ಏ.21 ರಂದು ನಡೆಯಲಿದ್ದು, ಏ.24 ರ ಮಧ್ಯಾಹ್ನ 3 ಗಂಟೆಯವರೆಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿರುತ್ತದೆಂದು ತಿಳಿಸಿದರು.
::: ಪೋಸ್ಟಲ್ ವೋಟ್ಸ್ :::
ಕೆಎಸ್‌ಆರ್‌ಟಿಸಿ, ಪೊಲೀಸ್, ಆಂಬ್ಯುಲೆನ್ಸ್ ಸೇರಿದಂತೆ ವಿವಿಧೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮತದಾನದಂದು ತಮ್ಮ ಮತಗಟ್ಟೆಗೆ ತೆರಳಲು ಸಾಧ್ಯವಾಗದಿರುವವರಿಗೆ ಪೋಸ್ಟಲ್ ವೋಟಿಂಗ್ ಅವಕಾಶವನ್ನು ಒದಗಿಸಲಾಗಿದೆ. ಇದರಡಿ ಈಗಾಗಲೆ 4917 ಮಂದಿಗೆ ಫಾರಂ ನಂ.12 ಜಿಲ್ಲಾ ವ್ಯಾಪ್ತಿಯಲ್ಲಿ ನೀಡಲಾಗಿದೆ. ಇದರಲ್ಲಿ 1240 ಮಂದಿ ಮತದಾನದ ಅವಕಾಶಕ್ಕಾಗಿ ಫಾರಂನ್ನು ಭರ್ತಿ ಮಾಡಿ ನೀಡಿದ್ದಾರೆ.ಉಳಿದವರು ಫಾರಂ ನೀಡಲು ಏ.29 ರವರೆಗೆ ಅವಕಾಶವಿರುವುದಾಗಿ ಸ್ಪಷ್ಟಪಡಿಸಿದರು.
::: ಇವಿಎಂ ಸರಬರಾಜು :::
ಈಗಾಗಲೆ ಜಿಲ್ಲೆಯ ಎರಡು ಕ್ಷೇತ್ರಗಳ ಚುನಾವಣಾ ಮತದಾನಕ್ಕಾಗಿ ಅಗತ್ಯವಿರುವ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳನ್ನು(ಇವಿಎಂ) ರ‍್ಯಾಂಡಮೈಸೇಷನ್ ಮಾಡುವ ಮೂಲಕ ಒದಗಿಸಲಾಗಿದೆ. ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಿಸಿದ ಇವಿಎಂ ಗಳನ್ನು ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿನ ಭದ್ರತಾ ಕೊಠಡಿ ಮತ್ತು ವಿರಾಜಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದ ಇವಿಎಂಗಳನ್ನು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಬಿಗಿ ಬಂದೋಬಸ್ತ್ನಲ್ಲಿ ಇರಿಸಲಾಗಿದೆಯೆಂದು ತಿಳಿಸಿದರು.
::: ವೆಬ್ ಕಾಸ್ಟಿಂಗ್ :::
ಕೊಡಗು ಜಿಲ್ಲೆಯಲ್ಲಿ ಮತದಾನಕ್ಕಾಗಿ 543 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಲ್ಲಿ ಶೇ.50 ರಷ್ಟು ಮತಗಟ್ಟೆಗಳಲ್ಲಿ ‘ವೆಬ್ ಕಾಸ್ಟಿಂಗ್’ ಮಾಡಲು ಉದ್ದೇಶಿಸಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ನಿಗದಿತ ಲಿಂಕ್ ಮೂಲಕ ಯಾರು ಬೇಕಾದರು ಆ ಮತಗಟ್ಟೆಯ ಕಾರ್ಯಚಟುವಟಿಕೆಯನ್ನು ನೊಡಬಹುದಾಗಿದೆಯೆಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ತಿಳಿಸಿದರು.
::: ಸೂಕ್ಷ್ಮ- ಅತೀ ಸೂಕ್ಷ್ಮ ಮತಗಟ್ಟೆ :::
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಒಟ್ಟು 109 ಸೂಕ್ಷ್ಮ ಮತ್ತು 12 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಮತ್ತು 12 ನಕ್ಸಲ್ ಪೀಡಿತ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲಾ ಗಡಿ ಕುಶಾಲನಗರದ ಕೊಪ್ಪ ಗೇಟ್‌ನಲ್ಲಿ ಸಿಐಎಸ್‌ಎಫ್ ತುಕಡಿಯನ್ನು ನಿಯೋಜಿಸಲಾಗಿದ್ದು, ಚುನಾವಣಾ ಭದ್ರತೆಗಾಗಿ 4 ಐಟಿಬಿಪಿ ತುಕಡಿಗಳನ್ನು ನಿಯೋಜಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಉಪಸ್ಥಿತರಿದ್ದರು.