ಮಡಿಕೇರಿ ಏ.20 : ಕೊಡಗು ಜಿಲ್ಲೆಯಲ್ಲಿ ತೀವ್ರತರವಾದ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯನ್ನು “ಬರ ಪೀಡಿತ ಪ್ರದೇಶ”ವೆಂದು ಘೋಷಿಸುವಂತೆ ಕೊಡಗು ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಚೊಟ್ಟಕ್‍ಮಾಡ ರಾಜೀವ್ ಬೋಪಯ್ಯ, ಕೊಡಗು ಜಿಲ್ಲೆ ಮಳೆಯನ್ನು ಆಶ್ರಯಿಸಿದ ಕೃಷಿ ಪ್ರದೇಶವಾಗಿದ್ದು, ಇದೀಗ ಹವಾಮಾನ ವೈಪರೀತ್ಯದಿಂದ ಮಳೆಯ ತೀವ್ರ ಕೊರತೆ ಎದುರಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಿಲ್ಲದೇ ಕಾಫಿ ಗಿಡಗಳು ಸಂಪೂರ್ಣ ಒಣಗಿ ಹೋಗಿದ್ದು, ಮತ್ತೆ ಹೊಸ ಗಿಡಗಳನ್ನು ಬೆಳೆಸಿ ಫಸಲು ಪಡೆಯಲು 20 ವರ್ಷಗಳ ಕಾಲ ಬೆಳೆಗಾರ ಪರದಾಡಬೇಕು. ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಬೆಳೆಗಾರರು, ಕೃಷಿ ಕಾರ್ಮಿಕರು, ರೈತರ ನೆರವಿಗೆ ಅಧಿಕಾರಿಗಳು ಮುಂದಾಗಬೇಕು. ಮಾತ್ರವಲ್ಲದೇ, ಕೊಡಗು ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿ ಜಿಲ್ಲೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಬೇರೆ ಜಿಲ್ಲೆಗಳಲ್ಲಿ ಇರುವಂತೆ ಕೊಡಗಿನಲ್ಲಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳಿಗೆ ಚೆಕ್ ಡ್ಯಾಂಗಳಿಲ್ಲ. ಹೀಗಾಗಿ ನೀರು ಹರಿದು ಹೋಗುತ್ತಿದ್ದು, ಅಂತರ್ ಜಲದ ಕೊರತೆಯೂ ಎದುರಾಗಿದೆ. ಹೀಗಾಗಿ ಯಾವುದೇ ಸರಕಾರಗಳು ಬಂದರೂ ಕೂಡ ಕೊಡಗು ಜಿಲ್ಲೆಯನ್ನು ವಿಶೇಷ ಪ್ರದೇಶ ಎಂದು ಪರಿಗಣಿಸಿ ಪ್ರತಿ ವರ್ಷವೂ ಹೆಚ್ಚಿನ ಅನುದಾನ ಒದಗಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಚೆಪ್ಪುಡಿರ ಶರೀನ್ ಮಾತನಾಡಿ, ಫೆಬ್ರವರಿಯಿಂದ ಮಾರ್ಚ್‍ವರೆಗೆ ಕಾಫಿ ಬೆಳೆಗೆ ಮಳೆ ಬೇಕಿದೆ. ಅದೇ ರೀತಿ ಏಪ್ರಿಲ್‍ನಿಂದ ಮೇ ತಿಂಗಳ ಅವಧಿಯಲ್ಲಿ ಕರಿಮೆಣಸು ಬೆಳೆಗೆ ಮಳೆ ಬೇಕಿದೆ. ಆದರೆ ಇದೀಗ ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದರೂ ಕೂಡ ಮಳೆಯಾಗಿಲ್ಲ. ಪರಿಣಾಮ ಈಗಾಗಲೇ ಶೇ.50ರಷ್ಟು ಕಾಫಿ ಫಸಲು ನಷ್ಟವಾಗಿದೆ. ಹೀಗಾದಲ್ಲಿ ಕೊಡಗಿನ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
::: ಬೆಲೆ ಏರಿಕೆಯಾಗಿಲ್ಲ :::
ಇದೀಗ ಕಾಫಿ ಬೆಳೆಗೆ ಭಾರೀ ಬೆಲೆ ಏರಿಕೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ಕಳೆದ 28 ವರ್ಷಗಳ ಬಳಿಕ ಬೆಲೆಯಲ್ಲಿ ಅಲ್ಪ ಏರಿಕೆಯಾಗಿರುವುದು ವಾಸ್ತವ. ಅದೇ ರೀತಿ ಕೃಷಿ ಪರಿಕರಗಳು, ಕಾರ್ಮಿಕರ ವೇತನ, ಗೊಬ್ಬರ, ತೋಟ ನಿರ್ವಹಣೆ ಕೂಡ ದುಬಾರಿಯಾಗಿದೆ. ರಷ್ಯಾ-ಉಕ್ರೇನ್ ಕದನ, ಕೋವಿಡ್ ಪರಿಸ್ಥಿತಿಯ ನಡುವೆ ಕಾಫಿ ರಫ್ತಿನಲ್ಲಿ ಏರಿಕೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಬೆಳೆಗಾರನ ಆರ್ಥಿಕ ಸ್ಥಿತಿ ಮಾತ್ರ ಹಾಗೆಯೇ ಉಳಿದಿದೆ ಎಂದು ಹೇಳಿದರು. ಕೇಂದ್ರ ಸರಕಾರ ಕೊಡಗು ಜಿಲ್ಲೆಯನ್ನು ಕಾಫಿ ಬೆಳೆಯ ಜಿಲ್ಲೆ ಎಂದು ಘೋಷಿಸಿದೆ. ಅದರಂತೆ ಕೇಂದ್ರ ಸರಕಾರ ಜಿಲ್ಲೆಯ ಬೆಳೆಗಾರರು, ಕಾರ್ಮಿಕರ ನೆರವಿಗಾಗಿ ಪರಿಹಾರ ನೀಡಬೇಕೆಂದು ಎಂದು ಆಗ್ರಹಿಸಿದರು.
::: ಭೂ ಪರಿವರ್ತನೆ ಬೇಡ :::
ವೇದಿಕೆಯ ಪ್ರಮುಖರಾದ ಕರ್ನಲ್ ಮುತ್ತಣ್ಣ ಮಾತನಾಡಿ, ಕೊಡಗು ಜಿಲ್ಲೆಯ ಭತ್ತದ ಗದ್ದೆಗಳು, ಕಾಫಿ ತೋಟಗಳನ್ನು ಭೂ ಪರಿವರ್ತನೆ ಮಾಡಲಾಗುತ್ತಿದೆ. ಪರಿಣಾಮವಾಗಿ ಕಾವೇರಿ ನದಿ ಜಲಾನಯನ ಪ್ರದೇಶ ಸಹಿತ, ಕೆರೆ ಬಾವಿ, ಬೋರ್ ವೆಲ್‍ಗಳ ಬತ್ತಿ ಹೋಗಿವೆ. ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆರ್.ಟಿ.ಐ ಹಕ್ಕಿನ ಮೂಲಕ ದೊರೆತ ಮಾಹಿತಿಯ ಪ್ರಕಾರ ಈಗಾಗಲೇ ಜಿಲ್ಲೆಯಲ್ಲಿ 3 ಸಾವಿರ ಎಕರೆ ಭೂ ಪ್ರದೇಶವನ್ನು ಪರಿವರ್ತನೆ ಮಾಡಲಾಗಿದೆ. ಕೊಡಗಿನಲ್ಲಿ ಬೃಹತ್ ಪ್ರಮಾಣದ ಭೂ ಪರಿವರ್ತನಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿ ಮಾಡಿದರು. ಸ್ವಂತ ಬಳಕೆಗೆ ತೋಟಗಳಲ್ಲಿ ಬೆಳೆದಿರುವ ಮರ ಕಡಿಯಲು ಕಾನೂನಿನಲ್ಲಿ ಅವಕಾಶವಿದ್ದು, ಅದಕ್ಕೆ ನಮ್ಮ ಆಕ್ಷೇಪ ಇಲ್ಲವೆಂದು ಕರ್ನಲ್ ಮುತ್ತಣ್ಣ ಸ್ಪಷ್ಟಪಡಿಸಿದರು. ಈ ಹಿಂದೆ 400 ಕೆ.ವಿ ವಿದ್ಯುತ್ ಲೈನ್ ಮಾರ್ಗಕ್ಕಾಗಿ 60 ಸಾವಿರ ಮರಗಳನ್ನು ಕಡಿಯಲಾಗಿದೆ. ಮಲ್ಟಿ ಹೈವೇ, ರೈಲ್ವೇ ಮಾರ್ಗ ಬಂದಲ್ಲಿ ಮತ್ತಷ್ಟು ಮರಗಳ ಹನನವಾಗಲಿದೆ ಎಂದು ಇದೇ ಸಂದರ್ಭ ಕರ್ನಲ್ ಮುತ್ತಣ್ಣ ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರಾದ ಅಣ್ಣೀರ ಹರೀಶ್ ಉಪಸ್ಥಿತರಿದ್ದರು.