ಮಡಿಕೇರಿ ಏ.19 : ಹಾಡಹಗಲೇ ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರ ಗಂಭೀರ ಗಾಯಗೊಂಡಿರುವ ಘಟನೆ ಇಂಜಿಲಗೆರೆಯ ಗ್ರಾಮದ ಕೌರಿ ಎಂಬಲ್ಲಿ ನಡೆದಿದೆ.
ಅಮ್ಮತ್ತಿ ಸಮೀಪದ ಕೌರಿ ನಿವಾಸಿ ಕಾಫಿ ಬೆಳೆಗಾರ ಉದ್ದಪಂಡ ಚಂಗಪ್ಪ (48) ಗಾಯಗೊಂಡ ವ್ಯಕ್ತಿ. ಮನೆಯಿಂದ ಕಾಫಿ ತೋಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಸಂದರ್ಭ ಕಾಡಾನೆಯೊಂದು ಹಿಂಬದಿಯಿಂದ ಬಂದು ಚಂಗಪ್ಪ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಕಾಡಾನೆ ದಾಳಿಯಿಂದ ಚಂಗಪ್ಪ ಅವರ ಸೊಂಟಕ್ಕೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅಮ್ಮತ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.









