ನಾಪೋಕ್ಲು ಏ.22 : ಮುಸಲ್ಮಾನ್ ಬಾಂಧವರು ಒಂದು ತಿಂಗಳ ವೃತಾಚರಣೆಯ ಬಳಿಕ ನಾಪೋಕ್ಲು ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈ ದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಶನಿವಾರ ಬೆಳಗ್ಗೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಅವರ ನೇತೃತ್ವದಲ್ಲಿ ಸಾಮೂಹಿಕ ಈ ದುಲ್ ಫಿತರ್ ನಮಾಜ್ ನಿರ್ವಹಿಸಲಾಯಿತು.
ಪ್ರತಿಯೊಬ್ಬರು ಪ್ರವಾದಿಯವರ ಸಂದೇಶದಂತೆ ನಾಡಿನಲ್ಲಿ ಶಾಂತಿ ಸೌಹಾರ್ದತೆ ಮತ್ತು ಐಕ್ಯತೆಯಿಂದ ಜೀವನ ನಡೆಸಬೇಕು. ಇಸ್ಲಾಂ ಶಾಂತಿಯ ಧರ್ಮ ವಾಗಿದ್ದು, ಇನ್ನೊಬ್ಬರಿಗೆ ನೋವುಂಟು ಮಾಡುವ ಕಾರ್ಯ ಪ್ರವರ್ತಿಗಳನ್ನು ಮಾಡದೆ ಎಲ್ಲಾ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಬೆಳೆಸಬೇಕೆಂದು ಅಶ್ರಫ್ ಅಹ್ಸನಿ ಅವರು ಈದ್ ಸಂದೇಶ ನೀಡಿದರು.
ಈ ಸಂದರ್ಭ ನಾಡಿನ ಸುಭಿಕ್ಷಕ್ಕಾಗಿ ಮತ್ತು ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಒಂದು ತಿಂಗಳ ಉಪವಾಸದ ದಿನದಲ್ಲಿ ಮಸೀದಿಯಲ್ಲಿನ ವಿವಿಧ ಉತ್ತಮ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿದ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಫಾರೂಕ್, ಶುಹೈಬ್, ಹಾರಿಸ್ ಅವರನ್ನು ಮಸೀದಿಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಎಲ್ಲರೂ ಸಿಹಿ ಹಂಚಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಜಮಾಅತ್ ಅಧ್ಯಕ್ಷ ಪಿ.ಎಂ. ಸಲೀಂ ಹಾರಿಸ್, ಉಪಾಧ್ಯಕ್ಷ ರಶೀದ್, ಕಾರ್ಯದರ್ಶಿ ಅಹಮದ್ ಸಿ.ಎಚ್, ಕಮಿಟಿ ಸದಸ್ಯರಾದ ಅಬ್ಬಾಸ್,ಅಸ್ಕರ್ ಸೈಟ್, ಜೈನುಲ್ ಆಬಿದ್, ಹಿರಿಯರಾದ ಕೆ.ಎಚ್. ಮಹಮ್ಮದ್, ಉಸ್ಮಾನ್ ಹಾಜಿ, ಅಹಮದ್ ಹಾಜಿ, ಅಸೈನಾರ್, ಶಾಹಿದ್ ಹಿಮಮಿ, ಸಾದಿಕ್ ನಿಜಾಮಿ, ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ಜಬ್ಬಾರ್,ಝಕರಿಯ ಅರಫಾತ್,ಇಬ್ರಾಹಿಂ, ಅನೀಫ್, ರಹೀಮ್,ರಶೀದ್ ಸೇರಿದಂತೆ ಜಮಾಅತ್ ನ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ವರದಿ : ಝಕರಿಯ ನಾಪೋಕ್ಲು