ಮಡಿಕೇರಿ ಏ.23 : ಸಾಮಾಜಿಕ ಕ್ರಾಂತಿಯ ಜಗದ್ಗುರು ಬಸವೇಶ್ವರರ ಜಯಂತಿಯನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪ್ರತಿಯೊಂದು ಜೀವಿಯ ಆತ್ಮೋದ್ಧಾರಕ್ಕೆ ಮಾರ್ಗ ತೋರಿದ ಗುರು ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ಮುಂದಾದ ಉದಾತ್ತ ತತ್ವಗಳನ್ನು ಭೋಧಿಸಿದ ಮಹಾನ್ ವ್ಯಕ್ತಿ. ಅಂದಿನ ಕಾಲಕ್ಕೆ ಒಂದು ದೇಶದ ಪ್ರಧಾನಿಯಾಗಿದ್ದುಕೊಂಡು ಪ್ರಜಾಪ್ರಭುತ್ವ, ಕಾಯಕಕ್ಕೆ ಪ್ರಧಾನ ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ಗುರು ಎಂದರೂ ತಪ್ಪಾಗುವುದಿಲ್ಲ. ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತಗೊಳಿಸದೇ ಭಕ್ತಿ ಮತ್ತು ರಾಜತಂತ್ರವನ್ನು ಜೊತೆ ಜೊತೆಗೇ ನಡೆಸಲು ಪ್ರೇರಕ ಶಕ್ತಿಯಾದ ಮಾರ್ಗದರ್ಶಕ, ಚೈತನ್ಯವೂ ಹೌದು.
ಭಾರತೀಯ ಸನಾತನ ಧರ್ಮ ಹೇಳಿದ್ದ “ಭಗವಂತ ನಿನ್ನಲ್ಲೇ ಇದ್ದಾನೆ” ಎಂಬುದನ್ನು ಬಸವಣ್ಣನವರು ಶರೀರವೇ ದೇವಸ್ಥಾನ, ಶಿರವೇ ಹೊನ್ನ ಕಲಶ ಎಂದು ಸಾಮಾನ್ಯರಿಗೂ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು.
::: ಉತ್ತರಾಧಿಕಾರಿ :::
ಶ್ರೀ ಸಿದ್ಧಗಂಗಾ ಮಠದಲ್ಲಿ ಬಸವ ಜಯಂತಿಯೊಂದಿಗೆ ಶ್ರೀ ಸಿದ್ಧಗಂಗಾ ಮಠದ ಪರಂಪರೆಯಲ್ಲಿ ಇರುವ ಕೆಲವು ಮಠಗಳಿಗೆ ಉತ್ತರಾಧಿಕಾರಿಗಳನ್ನು ನೇಮಿಸುವ ಕಾರ್ಯಕ್ರಮವೂ ನಡೆಯಿತು. ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.











