ವಿರಾಜಪೇಟೆ, ಏ 22: ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಪ್ರಮುಖರಾದ ಕುಟ್ಟಂಡ ಸರಸ್ವತಿಯವರು ಪೂಜಾ ಕಾರ್ಯಗಳಿಗೆ ಚಾಲನೆ ನೀಡಿದರು. ಬಳಿಕ ಅಮ್ಮತ್ತಿಯ ಗುರೂಜಿ ಗುರುರಾಜ್ ಭಟ್ ರವರ ನೇತೃತ್ವದಲ್ಲಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಬೆಳಗ್ಗಿನ ಜಾವ ಕ್ಷೇತ್ರದಲ್ಲಿರುವ ದೈವ ದೇವರುಗಳಿಗೆ ವಾದ್ಯಗೋಷ್ಠಿಯೊಂದಿಗೆ ಅಭಿಷೇಕ ಹಾಗೂ ಅಲಂಕಾರ ಪೂಜೆ, ನಂತರ ಗಣಪತಿ ಹೋಮ, ಮೃತ್ಯುಂಜಯ ಹೋಮ, ಚಂಡಿಕಾ ಹೋಮ ನಡೆಯಿತು. ಇದಾದ ನಂತರ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ಆಶ್ಲೇಷ ಬಲಿ, ನಾಗಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಮೃದ್ಧಿ ಎ.ವಿ ರವರಿಂದ ಭರತನಾಟ್ಯ ಹಾಗೂ ಗಾಯನ ಕಾರ್ಯಕ್ರಮ ಜರುಗಿತು. ರಾತ್ರಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮತ್ತಿಯ ಪಾಲಿಪಾರ್ವತಿ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ದೇವಾಲಯದ ಪ್ರಮುಖರಾದ ಕುಟ್ಟಂಡ ಸರಸ್ವತಿ ಲೋಕೇಶ್ ಮುತ್ತಪ್ಪ, ಹರ್ಷಿತಾ, ಹಾಗೂ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಉದ್ದಪಂಡ ಅಯ್ಯಪ್ಪ, ಕುಶಿ ಅಯ್ಯಪ್ಪ, ರಾಗಿಣಿ, ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅಮ್ಮತ್ತಿಯ ಶಿಕ್ಷಕಿ ವಿಶಾಲಾಕ್ಷಿ ರವರು ಧಾರ್ಮಿಕ ಪ್ರವಚನ ಕುರಿತು ಮಾತನಾಡಿದರು. ಗುರುರಾಜ್ ಭಟ್ ಸ್ವಾಗತಿಸಿ ವಂದಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.










