ನಾಪೋಕ್ಲು ಏ.24 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸಿದಂತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು ನಾಪೋಕ್ಲು ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ಪಥಸಂಚಲನ ನಡೆಸಿದರು.
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಮುಡಿ ಗ್ರಾಮದಿಂದ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯ ಮಾರ್ಗವಾಗಿ, ಎಮ್ಮೆಮಾಡು, ನೆಲಜಿ,ಕೊಳಕೇರಿ, ಕುಂಜಿಲ, ಕಕ್ಕಬ್ಬೆ, ನಾಲಡಿ, ಯುವಕಪಾಡಿ, ನೆರಿಯಂದಡ, ಚೇಲಾವರ ಗ್ರಾಮದವರೆಗೂ ಪಥಸಂಚಲನ ನಡೆಸುವ ಮೂಲಕ ಭಯಮುಕ್ತ ಚುನಾವಣೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಸುಂದರ್ ರಾಜ್, ಡಿವೈಎಸ್ಪಿ ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಶೇಖರ್ ಅವರ ಮಾರ್ಗದರ್ಶನದಂತೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅವರ ಮುಂದಾಳತ್ವದಲ್ಲಿ ನಡೆದ ಪಥಸಂಚನದಲ್ಲಿ ನಾಪೋಕ್ಲು ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. (ವರದಿ : ಝಕರಿಯ ನಾಪೋಕ್ಲು )