ಸೋಮವಾರಪೇಟೆ ಏ.24 : ಕಳೆದ 25 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಮೆ.10ರಂದು ನಡೆಯುವ ಚುನಾವಣೆಯಲ್ಲಿ ತನಗೆ ಮತನೀಡುವಂತೆ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮಾಡಿದರು.
ಭಾರತೀಯ ಜನತಾ ಪಾರ್ಟಿ ವತಿಯಿಂದ ಜೇಸಿ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಎಚ್.ಪಿ. ವರೆಗಿನ ವಿದ್ಯುತ್ ಮೋಟಾರುಗಳಿಗೆ ಉಚಿತ ವಿದ್ಯುತ್ ನೀಡುವುದು, ಆನೆ ಹಾವಳಿ ನಿಯಂತ್ರಣಕ್ಕೆ ರೈಲ್ವೇ ಬ್ಯಾರಿಕೇಡ್, ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ, ಫಾರಂ 53 ಮತ್ತು 57ರಲ್ಲಿ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ ಸಾಕಷ್ಟು ರೈತರಿಗೆ ಸಾಗುವಳಿ ಪತ್ರ ಸೇರಿದಂತೆ ಹಲವು ಕೆಲಸಗಳನ್ನು ಮಾಡಿಕೊಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲೆಯ ಎರಡೂ ಕ್ಷೇತ್ರಗಳಿಗೆ ಬೆಂಗಳೂರಿನಿಂದ ಅಭ್ಯರ್ಥಿಗಳನ್ನು ಆಮದು ಮಾಡಿಕೊಂಡು ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಗೆದ್ದ ನಂತರ ಇವರನ್ನು ಕಾಣಲು ಬೆಂಗಳೂರಿಗೆ ಹೋಗ ಬೇಕಾಗಿರುವುದರಿಂದ ಮನೆಯ ಮಗನಿಗೆ ಮತ ನೀಡಿ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕೆಂದರು.
ಅರಕಲಗೂಡಿನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಮೋದಿಯವರ ಉತ್ತಮ ಆಡಳಿತದಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವ ಹಾಗೆ ಹಾಗಿದೆ. ಬಿಜೆಪಿ ಎಂದಿಗೂ ಕಾರ್ಯಕರ್ತರು ಹಾಗು ಜನಸಾಮಾನ್ಯರ ಪಕ್ಷವಾಗಿದ್ದು, ಒಬ್ಬ ಬಡ ಕೂಲಿ ಕಾರ್ಮಿಕರಿಗೂ ವಿಧಾನ ಸಭೆಯಲಿ ಸ್ಪಧಿಸಲು ಬಿಜೆಪಿ ಮಾತ್ರ ಅನುವು ಮಾಡಿಕೊಟ್ಟಿದ್ದು, ಮೇ. 10ರಂದು ಭಾರತ ಮಾತೆಯ ರಕ್ಷಣೆ ಮಾಡುವ ಪಕ್ಷವಾದ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ದೇಶ ಸೇವೆಗೆ ಅವಕಾಶ ನೀಡಬೇಕೆಂದರು
ಬಸವಾಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಪಕ್ಷದ ಮುಖಂಡರಾದ ಭಾರತೀಶ್, ಎಸ್.ಜಿ. ಮೇದಪ್ಪ, ಲೋಕೇಶ್ವರಿ ಗೋಪಾಲ್, ಎಂ.ಬಿ.ಅಭಿಮನ್ಯು ಕುಮಾರ್, ಎಚ್.ಕೆ.ಮಾದಪ್ಪ ಮತ್ತಿತರರು ಇದ್ದರು.









