ಕುಶಾಲನಗರ ಏ.25 : ನಾಗರಿಕರು ಪ್ರಬುದ್ಧ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಬುದ್ಧ ಸಮಾಜ ನಿರ್ಮಾಣದ ಕನಸು ನನಸಾಗಿಸಲು ಸಾಧ್ಯ ಎಂದು ಗುಜರಾತ್ ರಾಜ್ಯದ ಶಾಸಕ ಡಾ. ಪ್ರದ್ಯಮಾನ್ ವಾಜಾ ಅಭಿಪ್ರಾಯಪಟ್ಟಿದ್ದಾರೆ.
ಕುಶಾಲನಗರ ಕಾರು ನಿಲ್ದಾಣದ ಆವರಣದಲ್ಲಿ ನಡೆದ ಬಿಜೆಪಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡಿನ ಸಮಗ್ರ ಅಭಿವೃದ್ಧಿ ಆಗಬೇಕಾದಲ್ಲಿ ಯೋಜನೆಗಳನ್ನು ರೂಪಿಸುವ ಸರಕಾರದ ಅವಶ್ಯಕತೆ ಇದೆ. ಹೆಚ್ಚಿನ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ಹೇಳಿದರು. ಮಡಿಕೇರಿ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚುರಂಜನ್ ಅವರನ್ನು ಮತ್ತೆ ಬೆಂಬಲಿಸಿ ಮತ ಚಲಾಯಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಮಾತನಾಡಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ವಿವಿಧ ಪಕ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.
ಕ್ಷೇತ್ರಗಳ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಸರ್ಕಾರ ಮೂಲಕ ರೂಪಿಸಲಾಗಿದೆ. ಮತದಾರರು ತಮ್ಮನ್ನು ಬೆಂಬಲಿಸುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಎಂದರು.
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ರಾಷ್ಟ್ರೀಯವಾದಿ ಸರ್ಕಾರದ ಅಗತ್ಯವಿದ್ದು, ದೇಶದ ಅಭಿವೃದ್ಧಿ, ಭದ್ರತೆ, ಜನಪರ ಕಾರ್ಯಯೋಜನೆಗಳನ್ನು ರೂಪಿಸುವ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವು ಇರುವ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಮತ್ತೆ ಬೆಂಬಲಿಸಿ ವಿಜೇತರನ್ನಾಗಿಸುವಂತೆ ಮನವಿ ಮಾಡಿದರು. ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪ್ರಮುಖರಾದ ಬಿ.ಬಿ.ಭಾರತೀಶ್, ಡಾ.ನವೀನ್ , ಅಮೃತರಾಜ್, ಜಯವರ್ಧನ್,ಎಚ್. ಎಸ್. ಅಶೋಕ್ ಮತ್ತಿತರರು ಇದ್ದರು.