ಮಡಿಕೇರಿ ಏ.26 : ವಿಧಾನಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ನಿರ್ದೇಶನಂತೆ ಮೈಕ್ರೋ ವೀಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದು ಚುನಾವಣಾ ಸಾಮಾನ್ಯ ವೀಕ್ಷಕರಾದ ವಿಕ್ರಮ್ ಸಿಂಗ್ ಮಲ್ಲಿಕ್ ಅವರು ಸೂಚಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಮೈಕ್ರೋ ವೀಕ್ಷಕರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಗಮವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೈಕ್ರೋ ವೀಕ್ಷಕರ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು. ಮತದಾನದ ಪಾವಿತ್ರ್ಯತೆ ಕಾಪಾಡಬೇಕು. ಚುನಾವಣೆ ಸಂಬಂಧ ಮಾಹಿತಿಯನ್ನು ನಿಖರವಾಗಿ ದಾಖಲು ಮಾಡಬೇಕು ಎಂದರು.
ಕಾಲ ಕಾಲಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಿಗೆ ಮಾಹಿತಿಯನ್ನು ನೀಡಬೇಕು. ಅಂಚೆ ಮತಪತ್ರ, ಮತದಾನದಂದು ಹಾಗೂ ಮತ ಎಣಿಕೆ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ, ವರದಿ ನೀಡಬೇಕು ಎಂದು ಚುನಾವಣಾ ಸಾಮಾನ್ಯ ವೀಕ್ಷಕರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಚುನಾವಣಾ ಮೈಕ್ರೋ ವೀಕ್ಷಕರು ವರದಿಯನ್ನು ಚುನಾವಣಾ ಸಾಮಾನ್ಯ ವೀಕ್ಷಕರಿಗೆ ನೀಡಬೇಕು. ಚುನಾವಣಾ ಆಯೋಗದ ನಿರ್ದೇಶನವನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ತರಬೇತಿಯಲ್ಲಿ ಅವರು ಹೇಳಿದರು.








