ಮಡಿಕೇರಿ ಏ.27 : ಕಾಂಗ್ರೆಸ್ ಅಭ್ಯರ್ಥಿಗಳು ಹೊರಗಿನವರು ಎನ್ನುವ ಜಿಲ್ಲೆಯ ಶಾಸಕರುಗಳ ಹೇಳಿಕೆ ಹಾಸ್ಯಾಸ್ಪದವಾಗಿದೆ. ಇಬ್ಬರು ಅಭ್ಯರ್ಥಿಗಳು ಸ್ವ ಕ್ಷೇತ್ರದವರೇ ಆಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ಹೊಂದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆಯ ಎ.ಎಸ್.ಪೊನ್ನಣ್ಣ ಅವರು ಜಿಲ್ಲೆಯವರೇ ಆಗಿದ್ದಾರೆ. ಜನಪರ ಕಾಳಜಿ ಹೊಂದಿರುವ ಇವರು ವಿದ್ಯಾವಂತರಾಗಿದ್ದು, ಜನರ ಒಲವು ಇಬ್ಬರ ಮೇಲಿದೆ. ಇದೇ ಕಾರಣಕ್ಕೆ ಶಾಸಕರು ಹಾಗೂ ಬೆಂಬಲಿಗರು ಹತಾಶೆಗೊಂಡು ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವು ಅನಿವಾರ್ಯವಾಗಿದೆ. ಜನರು ಕೂಡ ಬದಲಾವಣೆಯನ್ನು ಬಯಸಿದ್ದು, ಗೆಲುವಿಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೂ.450 ಇದ್ದ ಅಡುಗೆ ಅನಿಲದ ಬೆಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 1150 ತಲುಪಿದ್ದು, ಕೂಲಿ ಕಾರ್ಮಿಕರು ಅನಿಲ ಬಳಸಲಾಗದ ಸ್ಥಿತಿಗೆ ತಲುಪಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ದಿನಬಳಕೆಯ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಒಂದೆಡೆಯಾದರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಸಕ್ತಿ ತೋರದ ಶಾಸಕರುಗಳಿಂದಾಗಿ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ದೂರಿದರು.
ರಂಗಾಯಣದ ಜವಾಬ್ದಾರಿ ಹೊತ್ತಿರುವ ವ್ಯಕ್ತಿಯೊಬ್ಬರು ಕಾಂಗ್ರೆಸ್‍ಗೆ ಮತ ನೀಡುವ ಕುರಿತು ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಕಲಾಕ್ಷೇತ್ರಕ್ಕೆ ಅದರದ್ದೇ ಆದ ಗೌರವವಿದೆ, ಈ ಕ್ಷೇತ್ರಕ್ಕೆ ಅಗೌರವ ತೋರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ದುರಾದೃಷ್ಟಕರ ಮತ್ತು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾವನೆಗಳನ್ನು ಕೆಣಕಿ ಅಶಾಂತಿ ಸೃಷ್ಟಿಸುವುದು ಬಿಜೆಪಿಯ ಸಂಸ್ಕೃತಿಯಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಬೇಕೆ ಹೊರತು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಬಾರದು. ಜಿಲ್ಲೆಯ ಪ್ರಜ್ಞಾವಂತ ಮತದಾರರು ಬಿಜೆಪಿಯ ಸುಳ್ಳುಗಳಿಗೆ ಈ ಬಾರಿ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಸುರೇಶ್ ಭವಿಷ್ಯ ನುಡಿದರು.
ದೇಶದ ಪ್ರಜೆಗಳು ಸಂವಿಧಾನದ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಂವಿಧಾನವನ್ನು ನಾಶ ಮಾಡಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದರು.
ರೈತರು, ದಲಿತರು, ಕಾರ್ಮಿಕರು ನೆಮ್ಮದಿಯಿಂದ ಬದುಕಬೇಕಾಗಿದೆ. ಭ್ರಷ್ಟಚಾರ ಮತ್ತು ಕಮಿಷನ್ ದಂಧೆ ತೊಲಗಿ ಈ ರಾಜ್ಯ ಅಭಿವೃದ್ಧಿ ಕಾಣಬೇಕಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ಜಿಲ್ಲೆಯ ಜನ ಸಂಕಲ್ಪ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಾವ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಕಲೀಲ್ ಭಾಷ, ಗೆಜ್ಜೆಹಣುಕೂಡು ಬೂತ್ ಅಧ್ಯಕ್ಷ ಹೆಚ್.ಕೆ.ಮಹೇಶ್, ಕಾರ್ಯಕರ್ತರಾದ ಪಿ.ಪಿ.ರವಿ ಹಾಗೂ ಎಂ.ಆಲಿ ಉಪಸ್ಥಿತರಿದ್ದರು.
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*