ಮಡಿಕೇರಿ ಏ.28 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಕಾಲೇಜು ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ಕೆ.ರಮೇಶ್ ರೋಗಿಗಳು ಇಲ್ಲದೆ ವೈದ್ಯರಾಗಲು ಸಾಧ್ಯವಿಲ್ಲ, ಮುಗುಳುನಗೆಯಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ರೋಗಿಯು ಸಂತೃಪ್ತಿಯಿಂದ ಗುಣಮುಖರಾಗುತ್ತಾರೆ. ಹಣ ಮಾಡಬೇಕೆಂಬ ಉದ್ದೇಶ ಇರುವವರು ವೈದ್ಯ ಕ್ಷೇತ್ರಕ್ಕೆ ಬರಬಾರದು ಎಂದು ಕಿವಿಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಡಾ. ಮಾತ ಬಿ.ಮಂಜಮ್ಮ ಜೋಗತ್ತಿ ಅವರು ಮೊದಲ ಬಾರಿಗೆ ವೈದ್ಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ತಂದೆ ತಾಯಿಯರ ಕನಸು ನನಸು ಮಾಡಿರುವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸುವಂತೆ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆಕಾಶ್ ಎಸ್, ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಕಾರ್ಯಪ್ಪ ಕೆ.ಬಿ, ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿಗಳಾದ ಸ್ವಾಮಿ ಎ.ಎಲ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಜಯಲಕ್ಷ್ಮಿ ಪಾಟ್ಕರ್, ಎಂ.ಎ ನಿರಂಜನ್ ಉಪಸ್ಥಿತರಿದ್ದರು. ಈ ಬಾರಿ 150 ವೈದ್ಯ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿ ಪದವಿ ಸ್ವೀಕರಿಸಿದರು.









