ಮಡಿಕೇರಿ ಮೇ 1 : ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಶಿಕ್ಷಣ ಮತ್ತು ಜಾಗೃತಿ(ಸ್ವೀಪ್) ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಸ್ತ್ರೀಶಕ್ತಿ ಒಕ್ಕೂಟಗಳ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ರಂಗೋಲಿ ಸ್ಪರ್ಧಾ ಕಾರ್ಯಕ್ರಮವು ಜರುಗಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ರಂಗೋಲಿ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯು ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಅನಿಲ್ ಎಚ್.ಟಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಸಿಡಿಪಿಒಗಳಾದ ಸೀತಾಲಕ್ಷ್ಮಿ, ಸವಿತಾ ಇತರರು ಇದ್ದರು. ಮಡಿಕೇರಿ ತಾಲ್ಲೂಕಿನಿಂದ ಸುಮಾರು 30 ಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರು ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ ಮತದಾನದ ಮಹತ್ವ ಕುರಿತು ಸಾರಿದರು. ವಿಧಾನಸಭಾ ಚುನಾವಣೆಯ ಜಿಲ್ಲಾ ರಾಯಭಾರಿ ಹಾಗೂ ವಿಶೇಷ ಚೇತನರಾದ ಎಸ್.ಕೆ.ಈಶ್ವರಿ ಅವರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ವಿದ್ಯುನ್ಮಾನ ಮತಯಂತ್ರ, ಮತಗಟ್ಟೆ ಕೇಂದ್ರಗಳ ಚಿತ್ರಣ ಒಳಗೊಂಡ ರಂಗೋಲಿ ನೋಡುಗರ ಗಮನ ಸೆಳೆಯಿತು. ಬಣ್ಣ ಮತ್ತು ಪುಷ್ಪದಲ್ಲಿ ಬಿಡಿಸಿದ ರಂಗೋಲಿ ಗಮನ ಸೆಳೆಯಿತು. 18 ವರ್ಷದೊಳಗಿನವರೂ ಕೂಡ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ರಂಗೋಲಿ ಸ್ಪರ್ಧಾ ತೀರ್ಪುಗಾರರಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಪತ್ನಿ ರೂಪಶ್ರೀ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಕಾರ್ಯನಿರ್ವಹಿಸಿದರು.
ರಂಗೋಲಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ: 18 ವರ್ಷದೊಳಗಿನ ಮಕ್ಕಳ ಸ್ಪರ್ದೆಯಲ್ಲಿ ಮಡಿಕೇರಿ ನಗರದ ಮಾನ್ವಿ ಎಸ್. (ಪ್ರಥಮ) ಮೋಕ್ಷಿತ ಕೆ.ಜೆ. (ದ್ವಿತೀಯ) ಹಾಗೂ ರೀಕ್ಷಿತ (ತೃತೀಯ) ಸ್ಥಾನ ಪಡೆದರು.
ಹಾಗೆಯೇ 18 ವರ್ಷ ಮೇಲ್ಪಟ್ಟ ದಿವ್ಯ ಗಾಳಿಬೀಡು (ಪ್ರಥಮ) ಸುಶ್ಮಿತಾ ಟಿ.ಪಿ. (ದ್ವಿತೀಯ) ಹಾಗೂ ರಿವ್ಯ ಎಂ.ಎಂ. ತೃತೀಯ ಸ್ಥಾನ ಪಡೆದರು. ಮತ್ತು ಎಲ್ಲಾ ಸ್ಪರ್ಧಾರ್ಥಿಗಳಿಗೂ ಸಮಾಧನಕರ ಪ್ರಶಸ್ತಿ ಪತ್ರ ನೀಡಲಾಯಿತು.