Advertisement
4:07 PM Sunday 3-December 2023

*‘ಬಣ್ಣ’ ಶಿಬಿರದ ಸಮಾರೋಪ : ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ : ನವೀನ್ ಅಂಬೆಕಲ್ ಕರೆ*

30/04/2023

ಮಡಿಕೇರಿ ಏ.30 : ಮಕ್ಕಳಿಗೆ ಶಿಕ್ಷಣದ ಬೆಳಕನ್ನು ನೀಡುವುದರೊಂದಿಗೆ ‘ಸಂಸ್ಕಾರ’ವನ್ನು ನೀಡುವುದು ಅತ್ಯವಶ್ಯವೆಂದು ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ನವೀನ್ ಅಂಬೆಕಲ್ ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯದ ರಂರ ಮಯೂರಿ, ಮಡಿಕೇರಿ ತಾಲ್ಲೂಕು ಕಸಾಪ, ಮಡಿಕೇರಿಯ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಒಳಾಂಗಣ ಸಭಾಂಗಣದಲ್ಲಿ ಆಯೋಜಿತ ‘ಬಣ್ಣ’ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ರಂಗ ಮಯೂರಿಯ ಪ್ರಮುಖರಾದ ಲೋಕೇಶ್ ಊರುಬೈಲು ಅವರ ಪರಿಕಲ್ಪನೆಯ ಬಣ್ಣ ಶಿಬಿರದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವಿನೊಂದಿಗೆ, ರಂಗ ತರಬೇತಿಯನ್ನು ನೀಡಿರುವುದಲ್ಲದೆ, ಮಕ್ಕಳಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನೂ ಮೂಡಿಸುವ ಕೆಲಸ ಮಾಡಿರುವುದು ನಿಜಕ್ಕೂ ಮೆಚ್ಚುಗೆಯ ಅಂಶ. ರಂಗ ಮಯೂರಿಯ ಶಾಖೆಯನ್ನು ಮಡಿಕೇರಿಯಲ್ಲಿ ತೆರೆಯುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ತರಬೇತಿಯನ್ನು ನೀಡುವಂತೆ ಅವರು ಮನವಿ ಮಾಡಿದರು.
ಮಡಿಕೇರಿಯ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಕ್ಯೂರೇಟರ್ ರೇಖಾ ಅವರು ಮಾತನಾಡಿ, ಕಲೆ, ಸಂಸ್ಕೃತಿಯನ್ನು ಆಧರಿಸಿ ರಂಗ ಮಯೂರಿ ಸಂಸ್ಥೆಯಿಂದ ನಡೆಸುವ ಬಣ್ಣ ಶಿಬಿರಕ್ಕೆ ಇಲಾಖೆಯಿಂದ ಸಾಧ್ಯವಾಗುವ ಎಲ್ಲಾ ನೆರವನ್ನು ಒದಗಿಸುವುದಾಗಿ ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷರಾದ ಧನಂಜಯ ಅಗೋಳಿಕಜೆ ಮಾತನಾಡಿ, ಆಧುನೀಕತೆ ಮತ್ತು ಇಂಗ್ಲೀಷ್ ಮಾಧ್ಯಮದ ಶಿಕ್ಷಣ ವ್ಯವಸ್ಥೆಗಳ ನಡುವೆ ಈ ನೆಲದ ಕಲೆ, ಸಂಸ್ಕೃತಿಯ ರಕ್ಷಣೆೆಗೆ ಇಂತಹ ಶಿಬಿರಗಳು ಅತ್ಯವಶ್ಯವಾಗಿ ನಡೆಯುವ ಅಗತ್ಯವಿದೆ. ಪ್ರಸ್ತುತ ನಮ್ಮ ಆಡು ಭಾಷೆಯಿಂದ ನಾವೆಲ್ಲರು ಒಂದಷ್ಟು ದೂರ ಸರಿಯುತ್ತಿರುವ ಹಂತದಲ್ಲಿ, ಈ ನೆಲದ ಭಾಷೆ ಸಂಸ್ಕೃತಿಯನ್ನು ಸಂರಕ್ಷಿಸಲು ಪಠ್ಯ ಚಟುವಟಿಕೆಗಳನ್ನು ಮೀರಿದ, ಸಂಸ್ಕೃತಿಯನ್ನು ಆಧರಿಸಿದ ಇಂತಹ ಪಠ್ಯೇತರ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ನಡೆಯುವ ಅಗತ್ಯವಿರುವುದಾಗಿ ನುಡಿದರು.
‘ರಂಗ ಕ್ಷೇತ್ರ’ ಎನ್ನುವುದು ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿರುವಂತದ್ದು. ಇಂತಹ ರಂಗ ಕಲೆಗೆ ಹೊಸ ಕಾಯಕಲ್ಪವನ್ನು ನೀಡುವ ನಿಟ್ಟಿನಲ್ಲಿ, ಶಿಬಿರಗಳ ಮೂಲಕ ರಂಗ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ‘ಬಣ್ಣ’ ಶಿಬಿರದ ಪ್ರಯೋಗ ಸ್ತುತ್ಯರ್ಹವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗ ಮಯೂರಿಯ ಪ್ರಮುಖರಾದ ಲೋಕೇಶ್ ಊರು ಬೈಲು ಅವರು ಮಾತನಾಡಿ, ರಂಗ ಕಲೆ ಎನ್ನುವುದು ಒಬ್ಬ ವ್ಯಕ್ತಿಗೆ ಮೌನ, ಮಾತು ಮತ್ತು ಸಂಬಂಧಗಳ ಮಹತ್ವವನ್ನು ತಿಳಿಸಿಕೊಡುತ್ತದೆ ಮತ್ತು ಸಮಾಜಮುಖಿಯಾಗಿ ಹೇಗೆ ನಡೆದುಕೊಳ್ಳಬೇಕೆನ್ನುವ ಸೂಕ್ಷ್ಮತೆಗಳನ್ನು ಕಲಿಸಿಕೊಡುತ್ತದೆಂದು ಅಭಿಪ್ರಾಯಿಸಿದರು.
‘ಅಜ್ಜಿ ಕಥೆ’ ಮೂಲಕ ಪ್ರತಿಭಾ ಅನಾವರಣ- ಕಳೆದ ಒಂಭತ್ತು ದಿನಗಳ ಬಣ್ಣ ಶಿಬಿರದಲ್ಲಿ ಪಾಲ್ಗೊಂಡ ಇಪ್ಪತ್ತಕ್ಕೂ ಹೆಚ್ಚಿನ ಪುಟಾಣಿ ಮಕ್ಕಳು, ‘ಅಜ್ಜಿ ಕಥೆ’ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿ ಗಮನ ಸೆಳೆದರು. ಭಾಷಾ ಸ್ಪಷ್ಟತೆ, ಆಯಾ ಪಾತ್ರಗಳಿಗೆ ಸಲ್ಲಬೇಕಾದ ನ್ಯಾಯವನ್ನು ದೊರಕಿಸಿಕೊಡುವ ಮೂಲಕ ನೋಡುಗರ ಮನ ಗೆದ್ದರು, ನಾಟಕದಲ್ಲಿ ಬರುವ ಅಜ್ಜಿ, ಯೋಧರು, ಜಿಂಕೆ, ಆಚಾರ್ಯ, ರಾಣಿ, ಸೇವಕಿಯರು ಹೀಗೆ ಪ್ರತಿಯೊಂದು ಪಾತ್ರವನ್ನು ಮಕ್ಕಳು ಅನುಭವಿಸಿ ಪ್ರಸ್ತುತ ಪಡಿಸುವ ಮೂಲಕ ‘ಬಣ್ಣ’ ಶಿಬಿರಕ್ಕೆ ಅಂದವನ್ನು ನೀಡಿ, ಸೊಗಸಾಗಿ ಮುಕ್ತಾಯ ಹಾಡಿ ಅಪರೂಪದ ಕ್ಷಣಗಳಿಗೆ ಕಾರಣರಾದರು. ಇವರಿಗೆ ನಾಟಕದ ಪ್ರಾಥಮಿಕ ತಿಳುವಳಿಕೆ ನಿಡಿ ತಿದ್ದಿ ತೀಡಿದ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್ ಮತ್ತು ಶುಭಕರ್, ಪೋಷಕರು, ಮಕ್ಕಳು ತಮ್ಮ ಅನಿಸಿಕೆಗಳನ್ನು ಇದೇ ಸಂದರ್ಭ ಹಂಚಿಕೊಂಡರು.
ಶಿಬಿರಾರ್ಥಿಗಳ ‘ಕಲಿಸು ಗುರುವೆ ಕಲಿಸು’ ಆರಂಭಿಕ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಮೇಘಾ ಕೃಷ್ಣ ಸ್ವಾಗತಿಸಿದರು.