ಮಡಿಕೇರಿ ಮೇ 1 : ವಿಧಾನಸಭಾ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ಎರಡನೇ ಸುತ್ತಿನ ತರಬೇತಿ ಕಾರ್ಯಗಾರವು ಜರುಗಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ ವಿಧಾನಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚುತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದರು.
ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್, ಚುನಾವಣೆ ದಿನದಂದು ಅಣಕು ಮತದಾನ, ಮತದಾನ, ಮತದಾನ ಪೂರ್ಣಗೊಂಡ ನಂತರ ಅನುಸರಿಸಬೇಕಾದ ಕ್ರಮಗಳು, ಡಿಮಸ್ಟರಿಂಗ್ ಮತ್ತಿತರ ಕಾರ್ಯಗಳನ್ನು ನಿಯಮಾನುಸಾರ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 542 ಮತಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಮತಗಟ್ಟೆಗಳಿಗೆ ನಿಯೋಜಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಸುತ್ತಿನ ಚುನಾವಣಾ ತರಬೇತಿ ನೀಡಲಾಗುತ್ತಿದೆ ಎಂದರು.
ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಚುನಾವಣಾ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮತಗಟ್ಟೆ ಅಧಿಕಾರಿಗಳು ಪಾರದರ್ಶಕವಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರು ಮಾತನಾಡಿ ವಿಧಾನಸಭಾ ಚುನಾವಣೆಗೆ ನಿಯೋಜನೆ ಆಗಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಕ್ರಮಬದ್ಧವಾಗಿ ಚುನಾವಣೆ ನಡೆಸಬೇಕು. ಸಂಶಯ ಇದ್ದಲ್ಲಿ ಸೆಕ್ಟರ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು.
ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ, ಅಣಕು ಮತದಾನ ಮತ್ತಿತರ ಸಂಬಂಧ ಮತಗಟ್ಟೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಚುನಾವಣಾ ಪಾವಿತ್ರ್ಯತೆ ಕಾಪಾಡಬೇಕು ಎಂದು ಹೇಳಿದರು.
‘ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ ಮತ್ತು ಮೂರನೇ ಮತಗಟ್ಟೆ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಯತೀಶ್ ಉಲ್ಲಾಳ್ ಅವರು ತಿಳಿಸಿದರು.’
ಮಸ್ಟರಿಂಗ್, ಮತದಾನದಂದು ಮತ್ತು ಮತದಾನ ಪೂರ್ಣಗೊಂಡ ನಂತರ ಡಿಮಸ್ಟರಿಂಗ್ ಕಾರ್ಯನಿರ್ವಹಣೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಮಾಸ್ಟರ್ ತರಬೇತಿದಾರರಾದ ಕೆ.ಜೆ.ದಿವಾಕರ ಮತ್ತು ಪ್ರಶಾಂತ್ ಅವರು ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಯಾವುದೇ ಗೊಂದಲಗಳಿಗೆ ಅವಕಾಶ ಆಗುವುದಿಲ್ಲ ಎಂದರು.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ, ಏಜೆಂಟ್ ಅವರು ಚುನಾವಣೆ ಸಂಬಂಧ ಆಯೋಗದ ನಿರ್ದೇಶನ ಪಾಲಿಸಬೇಕು ಎಂದರು.
ಮತಗಟ್ಟೆ ಅಧಿಕಾರಿಗಳು ಅಣಕು ಮತದಾನ, ಪ್ರಮಾಣ ಪತ್ರ ಬರೆಯುವುದು, ಇವಿಎಂ, ಕಂಟ್ರೊಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿವಿಪ್ಯಾಟ್ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬನಾ ಎಂ.ಶೇಖ್, ತಹಶೀಲ್ದಾರರಾದ ಪ್ರಶಾಂತ್, ರಾಮಚಂದ್ರ, ಕಿರಣ್ ಜಿ.ಗೌರಯ್ಯ, ಎಸ್.ಎನ್.ನರಗುಂದ, ಟಿ.ಎಂ.ಪ್ರಕಾಶ್, ಶಾಲ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಯ್ಯ, ಸೆಕ್ಟರ್ ಅಧಿಕಾರಿಗಳು, ಪಿಆರ್‍ಒ, ಎಪಿಆರ್‍ಒ, ಇತರರು ಇದ್ದರು.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*