ಮಡಿಕೇರಿ ಮೇ 1 : ಆಮ್ ಆದ್ಮಿ ಪಕ್ಷದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಬೋಪಣ್ಣ ಪರವಾಗಿ ಕುಶಾಲನಗರ, ಸುಂಟಿಕೊಪ್ಪ, ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಯಿತು.
ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೂಡಿಗೆ, ಕೂಡುಮಂಗಳೂರು, ಗುಡ್ಡೆ ಹೊಸೂರು, ಅಂಧಗೋವೆ ಕಡೆಗಳಲ್ಲಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ತಿಳಿಸಿ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಕೆ.ಪಿ.ಬೋಪಣ್ಣ ಕೊಡಗಿನ ಸಮಗ್ರ ಅಭಿವೃದ್ಧಿಗಾಗಿ ಕಾಫಿಯ ಮಾರುಕಟ್ಟೆ, ಗುಣಮಟ್ಟ ನಿಯಂತ್ರಣ ಮತ್ತು ಸಂಶೋಧನೆಗೆ ಅನುಕೂಲವಾಗುವಂತೆ ಹೊಸ ಉಪಕ್ರಮ, ಅಕ್ರಮ ಲಾಗಿಂಗ್, ಗಣಿಗಾರಿಕೆ, ಕಳ್ಳಬೇಟೆ ಮತ್ತು ಅತಿಕ್ರಮಣ ತಡೆಯಲು ಕಠಿಣ ಕ್ರಮಗಳು, ಪರಿಸರ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಮತ್ತು ಸ್ಥಳೀಯರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು, ಸಶಸ್ತ್ರ ಸೇವೆಗಳಿಗೆ ಪ್ರದೇಶದ ವಿಶೇಷ ಕೊಡುಗೆಯನ್ನು ಗುರುತಿಸಲು ಯುದ್ಧ ಸ್ಮಾರಕ, ಕಾಫಿ ಬೆಳೆಗಾರರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಂತ ಉಪಯೋಗಕ್ಕೆ ಮರ ಕಡಿಯಲು ಸುಲಭದಲ್ಲಿ ಅನುಮತಿ ನೀಡಲು ಆದೇಶ ಪಡಿಸಲು ಕ್ರಮ ಕೈಗೊಳ್ಳಲಾಗುವುದು, ಅರಣ್ಯ ರಕ್ಷಣೆ ಕಾಯ್ದೆ ಅಡಿಯಲ್ಲಿ ಸಿಗಬೇಕಾದಂತಹ ಹಕ್ಕು ಹಾಗೂ ಸಮುದಾಯ ಹಕ್ಕುಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಕಾರ್ಯದರ್ಶಿ ಪೃಥ್ವಿ, ಪ್ರಮುಖರಾದ ಕಲ್ಯಾಣಿ, ಥೋಮಸ್ ಮತ್ತು ಇತರರು ಈ ಸಂದರ್ಭ ಹಾಜರಿದ್ದರು.