ಮಡಿಕೇರಿ ಮೇ 1 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಸಿರ್ ಮಕ್ಕಿ ನಾಪೋಕ್ಲುವಿನಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ನಾಪೋಕ್ಲು ಪಟ್ಟಣದ ಮನೆ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ತಮಗೆ ಮತ ನೀಡುವಂತೆ ಮನವಿ ಮಾಡಿದರು. ಬಳಿಕ ವಿವಿಧ ಗ್ರಾಮಗಳಿಗೆ ತೆರಳಿ ಮನೆಮನೆಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ನಾಸಿರ್ ಮಕ್ಕಿ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ. ಕೇವಲ ಮತ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದರು.
ಇದೀಗ ಪರಿಸ್ಥಿತಿ ಬದಲಾಗಿದ್ದು, ಅಲ್ಪಸಂಖ್ಯಾತರು ಪ್ರಜ್ಞಾವಂತರಾಗಿದ್ದಾರೆ. ಆಮಿಷ ಮತ್ತು ಒತ್ತಡಗಳಿಗೆ ಮಣಿಯದೆ ಅಭಿವೃದ್ಧಿಪರ ಚಿಂತನೆಯೊoದಿಗೆ ಮತದಾನ ಮಾಡಲಿದ್ದಾರೆ. ರಾಜಕೀಯ ಪಕ್ಷಗಳು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ ಅವರು, ತಾವು ಭೇಟಿ ನೀಡಿದ ಕಡೆಗಳಲ್ಲಿ ಎಲ್ಲಾ ವರ್ಗದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ವಿರಾಜಪೇಟೆ ಕ್ಷೇತ್ರದಲ್ಲಿ ನಾನು ರಾಜಕೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲಿದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಎ.ಹ್ಯಾರಿಸ್, ಬಶೀರ್, ರಾಶಿದ್, ಸುಲೈಮಾನ್, ಹನೀಫ, ಅಶ್ರಫ್, ಆಶಿಕ್, ಶೌಕತ್, ಶಮೀರ್, ಮುರಾದ್, ಮಹಮ್ಮದ್, ರಶೀದ್ ಸೇರಿದಂತೆ ಅಧಿಕ ಸಂಖ್ಯೆಯ ಬೆಂಬಲಿಗರು ನಾಸಿರ್ ಮಕ್ಕಿ ಪರ ಮತಯಾಚಿಸಿದರು.