ಸೋಮವಾರಪೇಟೆ ಮೇ 2 : ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಜನರ ಮನಸ್ಸನ್ನು ಗೆಲ್ಲಲಿಲ್ಲ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದರೆ ಚುನಾವಣಾ ಬಹಿಷ್ಕಾರ ಏಕೆ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಬಾರಿಯೂ ಪ್ರಜ್ಞಾವಂತ ಮತದಾರರು ಅವರಿಗೆ ಮತ ನೀಡಿದರೆ ಮಡಿಕೇರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಇನ್ನೂ ಇಪ್ಪತ್ತೈದು ವರ್ಷ ಹಿಂದಕ್ಕೆ ಹೋಗಲಿದೆ. ಕಳೆದ 25 ವರ್ಷಗಳಲ್ಲಿ ಯುವ ನಾಯಕರನ್ನು ಬೆಳೆಸಲಿಲ್ಲ ಎಂದು ದೂರಿದರು.
ವೈಯಕ್ತಿಕ ಟೀಕೆಯನ್ನು ಮಾಡುವುದು ರಂಜನ್ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು ಎಂದರು. ಬಿಜೆಪಿಯವರು ಕೇಂದ್ರ ನಾಯಕರನ್ನು ಕರೆದು ರೋಡ್ ಶೋ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‍ಗೆ ಕಾರ್ಯಕರ್ತರು ಮತ್ತು ಮುಖಂಡರುಗಳೇ ಸ್ಟಾರ್ ಪ್ರಚಾರಕರು. ನಮ್ಮ ಗೆಲುವಿಗೆ ಇವರೇ ಸಾಕು ಎಂದರು.
ಕೊಡಗು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್‍ಗೌಡ, ಸೋಮವಾರಪೇಟೆ ನಿವಾಸಿಯಾಗಿದ್ದಾರೆ. ಅವರು ಹೊರಗಿನವರು ಎಂದು ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.
ಅಪ್ಪಚ್ಚು ರಂಜನ್ ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರಿನವರು, ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದವರು. ಇವರುಗಳು ವಲಸೆ ಅಭ್ಯರ್ಥಿಗಳಾಗಿ, ಬೇರೆಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು. ಸೋಮವಾರಪೇಟೆಯ ಕೊಡುಗೆಯ ದಾನಿ ಸಾಕಮ್ಮ ಅವರ ಮೊಮ್ಮಗ ಮಂತರಗೌಡ ಎಂದರು.
ಅಪ್ಚಚ್ಚು ರಂಜನ್ ಅವರಿಗೆ ಭಯ ಪ್ರಾರಂಭವಾಗಿದೆ. ಅದಕ್ಕೆ ಅಮಿತ್‍ಷಾ ಅವರಿಂದ ರೋಡ್‍ಶೋ ಮಾಡಿಸಿದ್ದಾರೆ ಎಂದು ಟೀಕಿಸಿದರು.
ವೇದಿಕೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್, ಮುಖಂಡರುಗಳಾದ ಕೆ.ಎಂ.ಲೋಕೇಶ್, ಮಿಥುನ್ ಹಾನಗಲ್, ಕೆ.ಪಿ.ಚಂದ್ರಕಲಾ, ಅನಂತ್ ಕುಮಾರ್, ಕೆ.ಎ.ಯಾಕೂಬ್., ಶಾಂತವೇರಿ ವಸಂತ್, ಹಣಕೋಡು ಸುರೇಶ್, ಹೆಚ್.ಎ.ನಾಗರಾಜ್, ಹರಪಳ್ಳಿ ರವೀಂದ್ರ, ಎಸ್.ಎಂ.ಚಂಗಪ್ಪ, ಈಶ್ವರ ಚಂದ್ರ ಸಾಗರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಬಿಜೆಪಿ, ಜೆಡಿಎಸ್‍ನ ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.









