ಸೋಮವಾರಪೇಟೆ ಮೇ 1 : ಮಡಿಕೇರಿ ಕ್ಷೇತ್ರಕ್ಕೆ ಅರಕಲಗೂಡುವಿನಿಂದ, ವಿರಾಜಪೇಟೆ ಕ್ಷೇತ್ರಕ್ಕೆ ಬೆಂಗಳೂರಿನಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಅಮದು ಮಾಡಿಕೊಂಡಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್‍ಸಿಂಹ ಹೇಳಿದರು.
ಭಾರತೀಯ ಜನತಾಪಾರ್ಟಿಯ ವತಿಯಿಂದ ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ ಬಿ.ಎ.ಜೀವಿಜಯ, ಚಂದ್ರಮೌಳಿ, ಹರಪಳ್ಳಿ ರವೀಂದ್ರ, ಚಂದ್ರಕಲಾ, ಕೆ.ಎಂ.ಲೋಕೇಶ್ ಕುಮಾರ್ ಅವರಿಗೆ ಟಿಕೇಟ್ ನೀಡದೆ, ಹೊರಗಿನವರಿಗೆ ಕೊಟ್ಟು ಗೆಲುವು ಸಾಧಿಸುತ್ತೇವೆ ಎಂಬುದು ಭ್ರಮೆ ಎಂದು ಹೇಳಿದರು.
ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಗೆಲವು ಸಾಧಿಸಿ ಏನೂ ಮಾಡಬೇಕಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳನ್ನು ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಮಾಡಿ ಮುಗಿಸಿದ್ದಾರೆ ಎಂದರು.
ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, 1800ಕೋಟಿ ರೂ.ಗಳ ಅನುದಾನ ತಂದು ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪರಿಶಿಷ್ಟ ಜಾತಿ-ಪಂಗಡದ ಕಾಲೋನಿ, ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ಹಳ್ಳಿ ಹಳ್ಳಿಗೆ ರಸ್ತೆಗಳನ್ನು ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿ.ಪಂ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಪ್ರಮುಖರಾದ ಎಚ್.ಕೆ.ಮಾದಪ್ಪ, ಎಂ.ಬಿ.ಅಭಿಮನ್ಯುಕುಮಾರ್, ವಿ.ಎಂ.ವಿಜಯ, ವಿ.ಕೆ.ಲೋಕೇಶ್, ಪ್ರತಾಪ್, ಮಂಜುಳಾ ಸುಬ್ರಮಣಿ, ಪಿ.ಕೆ.ಚಂದ್ರು, ರೂಪ ಸತೀಶ್, ರಾಮಕೃಷ್ಣ ಹಾಜರಿದ್ದರು.









