ನಾಪೋಕ್ಲು ಮೇ 2 : ಸಮಾಜದ ಎಲ್ಲಾ ವರ್ಗದ ಜನರಿಗೆ ಹತ್ತು ಹಲವಾರು ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸುವುದು ಮಾತ್ರವಲ್ಲ ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ ಬೋಪಯ್ಯ ಹೇಳಿದರು.
ನಾಪೋಕ್ಲು ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ಅಭಿವೃದ್ಧಿಯಾಗಿದೆ. ಹುಣಸೂರು- ತಲಕಾವೇರಿ ರಾಜ್ಯ ಹೆದ್ದಾರಿ ಅಭಿವೃದ್ಧಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ಒದಗಿಸಲಾಗಿದ್ದು, ಅವರನ್ನು ಮುಖ್ಯ ವಾಹಿನಿಗೆ ತರಲು ಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿರೋಧಿಗಳು ರಸ್ತೆಗಳ ಅಭಿವೃದ್ಧಿ ಆಗಿಲ್ಲ. ಮೂಲಭೂತ ಸೌಕರ್ಯಗಳು ಲಭಿಸಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆಡಳಿತದಲ್ಲಿದ್ದ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಹೇಳಲಿ ಎಂದು ಸವಾಲು ಹಾಕಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಹಿಂದುತ್ವ ಎನ್ನುವುದು ದೇಶದ ಅಸ್ಮಿತೆ. ಹಾಗೆಂದು ಒಂದು ವರ್ಗದ ಜನರನ್ನು ಹೊರಗಿಡುವ ವ್ಯವಸ್ಥೆ ಇದಲ್ಲ. ಎಲ್ಲಾ ಜನಾಂಗದವರನ್ನು ಒಟ್ಟಿಗೆ ಕೊಂಡೊಯ್ಯುವುದೇ ಬಿಜೆಪಿ ಪಕ್ಷದ ಸಿದ್ಧಾಂತ. ಭಯೋತ್ಪಾದಕ ಸಂಘಟನೆಗಳನ್ನು ಎಂದಿಗೂ ಬಿಜೆಪಿ ಬೆಂಬಲಿಸುವುದಿಲ್ಲ. ಅಪಪ್ರಚಾರಕ್ಕೆ ಕಿವಿ ಕೊಡಬೇಡಿ ಎಂದರು.
ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮನು ಮುತ್ತಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಕೊಡವ ಕೌಟುಂಬಿಕ ಹಾಕಿ ಟೂರ್ನಿಗಾಗಿ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ. ಕೊಡವರಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ. ಅಧಿಕಾರದ ಅವಧಿಯಲ್ಲಿ ಬಡವರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಎಲ್ಲವೂ ಶಾಸಕ ಬೋಪಯ್ಯನವರ ಸಾಧನೆಯಾಗಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಬೋಪಯ್ಯ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಅಲ್ಪಸಂಖ್ಯಾತರ ಮಾಜಿ ಅಧ್ಯಕ್ಷ ರಫೀಕ್ ಎಮ್ಮೆಮಾಡು ಮಾತನಾಡಿ, ಅಲ್ಪಸಂಖ್ಯಾತರು ಎಲ್ಲರೂ ಬುದ್ದಿವಂತರು, ವಿದ್ಯಾವಂತರು ಹಾಗೆ ದೇಶವನ್ನು ಪ್ರೀತಿಸುವವರು ಇದ್ದಾರೆ. ಭಾರತ ಪಾಕಿಸ್ತಾನ ಕ್ರಿಕೆಟ್ ಆಡಿ ಗೆದ್ದಾಗ ಹಬ್ಬವನ್ನು ಆಚರಿಸುವ ಭಾರತೀಯರಿದ್ದರೆ ಅದನ್ನು ವಿರೋಧಿಸದ್ದಿದ್ದರೆ ಹಿಂದುಗಳಾಗಿದ್ದು ಏನು ಪ್ರಯೋಜನ ಎಂದು ನಾನು ಕೇಳುತ್ತೇನೆ ಎಂದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ನಾಣಯ್ಯ, ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್, ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಬೆಲ್ಲು ಸೋಮಯ್ಯ, ರವಿ ಬಸಪ್ಪ, ರಮೇಶ್ ಚಂಗಪ್ಪ, ರಮೇಶ್ ಮುದ್ದಯ್ಯ. ಹೊಸೂರು ಸತೀಶ್ ಕುಮಾರ್, ಬಿದ್ದಾಟಂಡ ರಮೇಶ್ ಚಂಗಪ್ಪ, ಕುಂಡಿಯೋಳಂಡ ರಮೇಶ್, ಮಾಜಿ ಜಿ.ಪಂ ಉಪಾಧ್ಯಕ್ಷ ಬಿದ್ದಂಡ ಉಷಾದೇವಮ್ಮ. ಜಿ.ಪಂ ಮಾಜಿ ಸದಸ್ಯ ಬೀನಾ ಬೊಳ್ಳಮ್ಮ, ನೆಲ್ಲಚ0ಡ ಕಿರಣ್ ಕಾರ್ಯಪ್ಪ, ತಾ.ಪಂ ಮಾಜಿ ಸದಸ್ಯ ನೆರೆಯಡಮ್ಮಂಡ ಉಮಾ ಪ್ರಭು, ಪ್ರತಿಜಾ ಅಚ್ಚಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ತಾಲೂಕು ಬಿಜೆಪಿ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಕೃಷಿ ಮೋರ್ಚಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಪ್ರಧಾನ ಕಾರ್ಯದರ್ಶಿ ಕೂಡಿರ ಪ್ರಸನ್ನ, ಕೇಟೋಳಿರ ಹರೀಶ್, ಚಂಬಾರಂಡ ಮಾಹಿನೆ, ಕರವಂಡ ಲವ ನಾಣಯ್ಯ, ಕಂಗಂಡ ಜಾಲಿ ಪೂವಪ್ಪ, ಬಿ.ಎಂ.ಪ್ರತೀಪ, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.