ಮಡಿಕೇರಿ ಮೇ 2 : ಕೊಡಗು ಜಿಲ್ಲೆಯಲ್ಲಿ ತ್ರಿಬಲ್ ಎಂಜಿನ್ ಸರ್ಕಾರವಿದೆ, ಸ್ಥಳೀಯ ಆಡಳಿತ, ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಬಿಜೆಪಿ ಪ್ರತಿನಿಧಿಗಳಿದ್ದಾರೆ. ಆದರೆ ಕೊಡಗಿನ ಪರಿಸ್ಥಿತಿ ನೋಡಿದರೆ ದು:ಖವಾಗುತ್ತದೆ ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಕಳೆದ 20-25 ವರ್ಷಗಳಿಂದ ಆಡಳಿತ ನಡೆಸಿದವರು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕೂಡ ನೀಡಿಲ್ಲ. ಈ ಬಾರಿ ಜಿಲ್ಲೆಯ ಜನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಾವುದೇ ವ್ಯಕ್ತಿ, ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರಗಿನವರೆಂದು ಹೇಳಿಕೆ ನೀಡಿರುವುದು ಖಂಡನೀಯ. ಸಂಸದರಾಗಿ ಅವರ ಸ್ಥಾನಕ್ಕೆ ಈ ರೀತಿಯ ಹೇಳಿಕೆ ಶೋಭೆ ತರುವುದಿಲ್ಲ. ಪ್ರತಾಪ್ ಸಿಂಹ ಅವರು ಕೊಡಗಿನವರೇ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ, ನಗರಾಧ್ಯಕ್ಷ ಬಿ.ವೈ.ರಾಜೇಶ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಉಪಸ್ಥಿತರಿದ್ದರು.