ಮಡಿಕೇರಿ ಮೇ 3 : ಚುನಾವಣೆ ಸಂದರ್ಭ ರಾಜೀನಾಮೆ ಪರ್ವ ಸಾಮಾನ್ಯ, ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾದರೆ ಅವರ ಸಲಹೆಗಳನ್ನು ಪಡೆಯಲು ನಾವು ಬದ್ಧರಾಗಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸ್ಪರ್ಧೆಯಲ್ಲಿದ್ದ ಏಳು ಕಾಂಗ್ರೆಸ್ಸಿಗರಲ್ಲಿ ಓರ್ವರನ್ನು ಒಮ್ಮತದಿಂದ ಆಯ್ಕೆ ಮಾಡಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಗೆಲ್ಲಿಸಿಕೊಂಡು ಬರುವ ಕುರಿತು ಸಲಹೆ ನೀಡಿದ ಜೀವಿಜಯ ಅವರೇ ಇದೀಗ ರಾಜೀನಾಮೆ ನೀಡಿರುವುದು ಸರಿಯಲ್ಲಿ. ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ನಡೆದುಕೊಂಡಿರುವುದು ಬೇಸರವನ್ನುಂಟು ಮಾಡಿದೆ ಎಂದರು.
ಜಾತ್ಯತೀತ ನೆಲೆಗಟ್ಟಿನ ರಾಜಕಾರಣ ಮಾಡಿಕೊಂಡು ಬಂದವರು ಇದೀಗ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಹಾಗೂ ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಅವರ ಪರ ಮಾತನಾಡುತ್ತಿದ್ದಾರೆ. ಈಗ ಜೀವಿಜಯ ಅವರ ಜಾತ್ಯತೀತ ಸಿದ್ಧಾಂತ ಎಲ್ಲಿಗೆ ಹೋಯಿತು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಹೊರಗಿನವರು ಎಂದು ಟೀಕಿಸುತ್ತಿರುವ ಜೀವಿಜಯ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಡಾ.ಮಂತರ್ ಗೌಡರನ್ನು ಬೆಂಬಲಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಇದೀಗ ವಿಧಾನಸಭಾ ಚುನಾವಣೆ ಸಂದರ್ಭ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.
ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗರು ಒಗ್ಗಟ್ಟಿನಿಂದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಡಾ.ಮಂತರ್ ಗೌಡ ಪರ ಜನಸಾಗರವೇ ಹರಿದು ಬರುತ್ತಿದೆ. ಅವರಿಗೆ ಜನಬೆಂಬಲವಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅನಂತಕುಮಾರ್ ಅವರಿಗೆ ಪಕ್ಷ ಎಲ್ಲಾ ಸ್ಥಾನಮಾನಗಳನ್ನು ನೀಡಿದೆ. ಆದರೆ ಅವರು ಯಾಕೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಅವರುಗಳೇ ಬಗೆಹರಿಸಿಕೊಳ್ಳಬಹುದಿತ್ತು ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಎರಡನೇ ಹಂತದ ನಾಯಕರಿಗೆ ಮಾರ್ಗದರ್ಶನ ಮಾಡಬೇಕಾದ ಮತ್ತು ರಾಜಕೀಯವಾಗಿ ಬೆಳೆಸಬೇಕಾದ ಜೀವಿಜಯ ಅವರು ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. ಇವರು ತೆಗೆದುಕೊಂಡಿರುವ ನಿಲುವು ದು:ಖವನ್ನು ತಂದಿದೆ, ಹಿರಿಯ ರಾಜಕಾರಣಿಯಾಗಿ ಮಾರ್ಗದರ್ಶನ ಮಾಡುವ ಬದಲು ಅಧಿಕಾರದಾಹದ ರಾಜಕಾರಣ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.
ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಸಮರ್ಥವಾಗಿ ಚುನಾವಣೆಯನ್ನು ಎದುರಿಸುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭೂತಪೂರ್ವ ಜನ ಬೆಂಬಲ ದೊರೆಯುತ್ತಿದೆ. ಕಳೆದ 20- 25 ವರ್ಷಗಳಿಂದ ಇದ್ದ ಜನಪ್ರತಿನಿಧಿಗಳ ಆಡಳಿತದಿಂದ ಬೇಸತ್ತಿರುವ ಜನತೆ ಬದಲಾವಣೆಯನ್ನು ಬಯಸಿದ್ದು, ಗೆಲುವು ನಿಶ್ಚಿತವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗುವುದು. ಹೋಂಸ್ಟೇ ಮಾಲೀಕರುಗಳಿಗೆ ಶೇ.5 ರ ಬಡ್ಡಿ ದರದಲ್ಲಿ 10 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ರೈತರಿಗೆ 10 ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಮಲೆನಾಡು, ಮೈಸೂರು ಭಾಗದ ಅಭಿವೃದ್ಧಿಗೆ ವಿಶೇಷ ನಿಧಿ ಸ್ಥಾಪಿಸಲಾಗುವುದು, ಕರ್ನಾಟಕ ಕಾಫಿ ಬ್ರ್ಯಾಂಡ್ ಮೂಲಕ ಕಾಫಿಗೆ ಉತ್ತೇಜನ ನೀಡಲಾಗುವುದು. ಕಾವೇರಿ ನದಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ ಆಡಳಿತ ಪಕ್ಷದ ವೈಫಲ್ಯ ಮತ್ತು ದೌರ್ಬಲ್ಯಗಳು ಕಾಂಗ್ರೆಸ್ ಗೆ ಅಸ್ತ್ರವಾಗಲಿದೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟಿನಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಕಾಫಿ ವಾಣಿಜ್ಯ ಬೆಳೆ ಎಂದು ಉಚಿತ ವಿದ್ಯುತ್ ನೀಡದೆ ಸರ್ಕಾರ ವಂಚಿಸಿದೆ. ಜಮ್ಮಾ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಕಂದಾಯ ಸಚಿವರು ಹೇಳಿಕೆ ನೀಡುತ್ತಾರೆ. ಆದರೆ ಜಿಲ್ಲೆಯ ಇಬ್ಬರು ಶಾಸಕರುಗಳು ಮಾತ್ರ ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.
ಗಿರಿಜನರ ಬದುಕು ಅತಂತ್ರವಾಗಿದೆ, ಮಾನವ- ವನ್ಯಜೀವಿಗಳ ಸಂಘರ್ಷ ಅಧಿಕವಾಗಿದೆ. ಜಿಲ್ಲೆಯ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಆದರೆ ಸುದೀರ್ಘ ಕಾಲ ಶಾಸಕರಾದವರು ಏನನ್ನೂ ಮಾಡದೆ ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅರುಣ್ ಮಾಚಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ನಗರಾಧ್ಯಕ್ಷ ಬಿ.ವೈ.ರಾಜೇಶ್ ಉಪಸ್ಥಿತರಿದ್ದರು.
Breaking News
- *ಹೆಬ್ಬಾಲೆ ಸರ್ಕಾರಿ ಶಾಲೆಯಲ್ಲಿ ಗಮನ ಸೆಳೆದ ಇಂಗ್ಲಿಷ್ ಭಾಷಾ ಮೇಳ*
- *”ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ”ಗೆ ಕೃತಿಗಳ ಆಹ್ವಾನ*
- *ಮಾವಿನಹಳ್ಳ ಹಾಡಿ ಮತ್ತು ಕಟ್ಟೆ ಹಾಡಿಯ ಅರಣ್ಯ ಹಕ್ಕು ಗ್ರಾಮಸಭೆ*
- *ಬಾಳೆಲೆ : ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ*
- *ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ*
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*