ಮಡಿಕೇರಿ ಏ.3 : ಡಬಲ್ ಎಂಜಿನ್ ಸರ್ಕಾರ ಮಹಿಳಾ ಸಬಲೀಕರಣ ಮತ್ತು ಶಿಕ್ಷಣಕ್ಕಾಗಿ ಒತ್ತು ನೀಡಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಜನಪರ ಯೋಜನೆಗಳು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಅನಿತಾ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಟಿ ಬಚಾವೋ, ಬೇಟಿ ಪಡಾವೋ ಸೇರಿದಂತೆ ಹಲವು ಯೋಜನೆಗಳ ಮೂಲಕ ನಾರಿಶಕ್ತಿಯ ಅಭ್ಯುದಯಕ್ಕೆ ಕಂಕಣಬದ್ಧರಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದುಡಿಯುತ್ತಿದೆ ಎಂದರು.
2014 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದಲ್ಲಿ ಅತಿ ಹೆಚ್ಚು ಮಹಿಳಾ ಮಂತ್ರಿಗಳನ್ನು ಹೊಂದಿರುವ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ಮಹಿಳೆಯರು ಮಹಾಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಆರೋಗ್ಯ, ಜೀವನೋಪಾಯ ಮತ್ತು ಶಿಕ್ಷಣದಿಂದ ಜೀವನದ ಗುಣಮಟ್ಟ ಸುಧಾರಿಸಿದೆ.
ಜಲಜೀವನ್ ಮಿಷನ್ ಮೂಲಕ ನೀರಿನ ಸಂಪರ್ಕ, ಸ್ವಚ್ಛಭಾರತ್ ಮಿಷನ್, ಉಜ್ವಲ ಯೋಜನೆಯಿಂದ ಉಚಿತ ಎಲ್ಪಿಜಿ ಸಂಪರ್ಕ, ಗರ್ಭಿಣಿ ಮಹಿಳೆಯರ ಸುಧಾರಣೆಗೆ ಮಾತೃಪೂರ್ಣ ಯೋಜನೆ, ಮಾತೃ ವಂದನಾ ಯೋಜನೆ, ಮಕ್ಕಳ ಸುರಕ್ಷತೆಗೆ ಪೋಷಣ್ ಅಭಿಯಾನ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಸಂಧ್ಯಾ ಸುರಕ್ಷ ಯೋಜನೆ, ವೃದ್ಧಾಪ್ಯ ಪಿಂಚಣಿ, ಪಿಎಂ ಸುರಕ್ಷಿತ್ ಮಾತೃತ್ವ ಅಭಿಯಾನ, ಗೃಹಿಣಿ ಶಕ್ತಿ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ಧಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ತನ್ನ ಪೊಳ್ಳು ಭರವಸೆಗಳಿಂದ ಮಹಿಳೆಯರನ್ನು ವಂಚಿಸಿದೆ ಎಂದು ದೂರಿದ ಅನಿತಾ ಪೂವಯ್ಯ, ಈ ಬಾರಿಯೂ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಘಟಕದ ಉಸ್ತುವಾರಿ ಉಷಾ ದೇವಮ್ಮ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ಸವಿತಾ ರಾಕೇಶ್, ಗ್ರಾಮಾಂತರ ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಸೋಮವಾರಪೇಟೆ ಮಂಡಲ ಅಧ್ಯಕ್ಷೆ ಮಂಜುಳಾ ಸುಬ್ರಮಣಿ ಹಾಗೂ ಉಪಾಧ್ಯಕ್ಷೆ ಭಾನುಮತಿ ಉಪಸ್ಥಿತರಿದ್ದರು.










