ಮಡಿಕೇರಿ ಮೇ 4 : ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ ಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು
1972 ರಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದು ಪ್ರತಿವರ್ಷ ನಡೆಸಲಾಗುತ್ತದೆ. ಕಳೆದ ವರ್ಷದವರೆಗೆ 12,576 ಜೊತೆ ವಿವಾಹವಾಗಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
* ಈವರೆಗೆ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.