ಮಡಿಕೇರಿ ಮೇ 15 : ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡವ ಯುವ ಸಮುದಾಯದಲ್ಲಿ ಇಲ್ಲಿನ ಸಂಸ್ಕೃತಿ ಪರಂಪರೆಗಳ ಬಗ್ಗೆ ಅರಿವು ಮೂಡಿಸುವ ಮಹತ್ತರ ಉದ್ದೇಶವನ್ನಿರಿಸಿಕೊಂಡು ಮೇ20 ರಂದು ಮಡಿಕೇರಿಯಲ್ಲಿ ‘ಕೊಡವ ಯುವ ಮೇಳ-2023’ ನ್ನು ಆಯೋಜಿಸಲಾಗಿದೆಯೆಂದು ಟ್ರಸ್ಟ್ ಸಂಚಾಲಕ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯುವ ಸಮೂಹವನ್ನು ನಮ್ಮ ಶ್ರೀಮಂತ ಸಂಸ್ಕೃತಿಯ ಜೊತೆ ಜೊತೆಯಲ್ಲಿ ಸಾಗುವಂತೆ ಮಾಡುವುದು ಮತ್ತು ಮಾದಕ ದ್ರವ್ಯದಂತಹ ದುಶ್ಚಟಗಳಿಂದ ಯುವ ಸಮೂಹವನ್ನು ದೂರ ಇಟ್ಟು ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಚಿಂತನೆಗಳ ಹಿನ್ನೆಲೆ ಯುವ ಮೇಳವನ್ನು ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆಯೆಂದು ತಿಳಿಸಿದರು.
ಟ್ರಸ್ಟ್ ಪದಾಧಿಕಾರಿ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಅವರು ಮಾತನಾಡಿ, ಯುವ ಮೇಳದ ಹಿನ್ನೆಲೆ ಅಂದು ಬೆಳಗ್ಗೆ 10.30 ಗಂಟೆಗೆ ನಗರದ ಕಾವೇರಿ ಹಾಲ್ ಬಳಿಯಿಂದ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಕಾಲೇಜು ರಸ್ತೆ, ಎಸ್‍ಬಿಐ ಮೂಲಕ ಹಳೇ ಖಾಸಗಿ ಬಸ್ ನಿಲ್ದಾಣದ ಮೂಲಕ ಕ್ರಿಸ್ಟಲ್ ಕೋರ್ಟ್ ಸಭಾಂಗಣದನ್ನು ತಲುಪಲಿದೆ. ಯುವ ಮೇಳದಲ್ಲಿ 3 ರಿಂದ 4 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಮಾಹಿತಿಯನ್ನಿತ್ತರು.
ಸನ್ಮಾನ ಮತ್ತು ಸಾಧಕರ ಮಾತು- ಮಧ್ಯಾಹ್ನ 2 ಗಂಟೆಗೆ ಯುವ ಮೇಳದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 40 ವರ್ಷದೊಳಗಿನ 10 ಮಂದಿ ವಿವಿಧ ವಿಷಯಗಳ ಕುರಿತು, ಯುವ ಸಮೂಹಕ್ಕೆ ಪ್ರೇರಣಾದಾಯಕವಾದ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ 17 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದು ವಿವರಗಳನ್ನಿತ್ತರು.
ಸಾಧಕರ ಮಾತು ಮತ್ತು ಸನ್ಮಾನದ ನಡುವೆ ನಾಟಕ, ಕೊಡವ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 5.30 ಗಂಟೆಗೆ ಕೊಡವ ಸಂಸ್ಕೃತಿಗೆ ಪೂರಕವಾದ ‘ಫ್ಯಾಷನ್ ಶೋ’, ಸಂಜೆ 6.30 ರಿಂದ ಒಂದು ಗಂಟೆಗಳ ಕಾಲ ಕೊಡವ ಡಿಜೆ ಕಾರ್ಯಕ್ರಮ ನಡೆಯಲಿದೆಯೆಂದು ತಿಳಿಸಿದರು.
ಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸದಸ್ಯರಾದ ಮಲ್ಲಮಾಡ ಪ್ರಭು ಪೂಣಚ್ಚ, ಪಾಲೇಂಗಡ ಅಮಿತ್ ಭೀಮಯ್ಯ, ಅಪ್ಪಂಡೇರಂಡ ಯಶವಂತ್ ಕಾಳಪ್ಪ ಉಪಸ್ಥಿತರಿದ್ದರು.