ಮಡಿಕೇರಿ ಮೇ 16 : ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಜಿಲ್ಲೆಯ ಶಾಸಕರಿಗೆ ಅವಕಾಶ ಒದಗಿಸುವುದರೊಂದಿಗೆ, ಸ್ಥಳೀಯರನ್ನೆ ಜಿಲ್ಲಾ ಉಸ್ತುವಾರಿಯನ್ನಾಗಿ ನಿಯುಕ್ತಿಗೊಳಿಸಬೇಕೆಂದು ಮಾಜಿ ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಡಿಕೇರಿ ಕ್ಷೇತ್ರದಿಂದ ಡಾ.ಮಂಥರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಅಜ್ಜಿಕುಟ್ಟೀರ ಪೊನ್ನಣ್ಣ ಅವರು ಆಯ್ಕೆಯಾಗಿದ್ದು, ಇವರಿಬ್ಬರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿಯನ್ನು ಹೊಂದಿದ್ದು, ಇವರಿಗೆ ಸಚಿವ ಸ್ಥಾನವನ್ನು ನೀಡಬೇಕು. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಸಭೆ ನಡೆಸಿ ಕಾಂಗ್ರೆಸ್ ವರಿಷ್ಠರ ಬಳಿಗೆ ನಿಯೋಗ ತೆರಳಿ ಆಗ್ರಹಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಕೊಡಗಿಗೆ ಆದ್ಯತೆ ನೀಡಿ- ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಪಡೆದುಕೊಂಡಿದ್ದು, ನೂತನ ಸರ್ಕಾರದಲ್ಲಿ ಮುಖ್ಯ ಮಂತ್ರಿಗಳಾಗಿ ಯಾರೇ ಅಧಿಕಾರಕ್ಕೆ ಬರಲಿ, ಅವರು ಕೊಡಗಿನ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತಾಗಬೇಕು. ಜಿಲ್ಲೆಯ ಸರ್ವಾಂಗಿಣ ಪ್ರಗತಿಗೆ ಒತ್ತು ನೀಡುವಂತೆ ಸರ್ಕಾರವನ್ನು ಆಗ್ರಹಿಸಲು ಎಲ್ಲಾ ಸಂಘ ಸಂಸ್ಥೆಗಳು, ಪಕ್ಷದ ಮುಖಂಡರೊಂದಿಗೆ ಸೇರಿ ಹೋರಾಟವನ್ನು ರೂಪಿಸಿ, ಒಗ್ಗಟ್ಟಿನ ಪ್ರದರ್ಶನವನ್ನು ಮಾಡುವುದಾಗಿ ವೀಣಾ ಅಚ್ಚಯ್ಯ ಸ್ಪಷ್ಟಪಡಿಸಿದರು.
ಜಿಲ್ಲೆಯ ಜನತೆಯ ಆಶೋತ್ತರ ಪರಿಗಣಿಸಿ- ಜಿಲ್ಲೆಯ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳು ಮುಂಬರುವ ದಿನಗಳಲ್ಲಿ, ಜಿಲ್ಲೆಯ ಜನತೆ ತಮ್ಮ ಮೇಲಿ ಇರಿಸಿರುವ ನಂಬಿಕೆಗೆ ತಕ್ಕಂತೆ ಅವರ ಆಶೋತ್ತರಗಳ ಈಡೇರಿಕೆಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯ. ಸರ್ಕಾರ ರಚನಾ ಪ್ರಕ್ರಿಯೆಗಳು ಮುಕ್ತಾಯಗೊಂಡು ಜಿಲ್ಲೆಗೆ ಆಗಮಿಸುವ ನೂತನ ಶಾಸಕರುಗಳೊಂದಿಗೆ, ಜಿಲ್ಲಾ ಕಾಂಗ್ರೆಸ್ ಪ್ರಮುಖರು ಸಭೆ ನಡೆಸಿ, ಕೊಡಗಿನ ಸಮಗ್ರ ಅಭಿವೃದ್ಧಿಗೆ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆನ್ನುವ ಬಗ್ಗೆ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಪ್ರಣಾಳಿಕೆ ಈಡೇರಿಕೆ ಒತ್ತು ನೀಡಿ- ಜಿಲ್ಲೆಯ ಎರಡು ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ಕ್ಷೇತ್ರಕ್ಕೆ ಸೀಮಿತವಾದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಆ ಪ್ರಣಾಳಿಕೆಯಲ್ಲಿ ಸೂಚಿಸಿರುವ ಭರವಸೆಗಳ ಈಡೇರಿಕೆಗೆ ಅಗತ್ಯ ಪ್ರಯತ್ನಗಳನ್ನು ನಡೆಸಬೇಕು. ಅಂತಹ ಪ್ರಯತ್ನಗಳನ್ನು ನಡೆಸುವ ಪೂರ್ಣ ವಿಶ್ವಾಸ ತಮಗಿರುವುದಾಗಿ ಸ್ಪಷ್ಟಪಡಿಸಿದರು.
ಚುನಾಯಿತ ಜನಪ್ರತಿನಿಧಿಗಳು ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುನ್ನಡಿ ಇಡುವುದು ಅತ್ಯವಶ್ಯ. ಆ ಮೂಲಕ ಕೊಡಗಿನ ಜ್ವಲಂತ ಹತ್ತು ಹಲ ಸಮಸ್ಯೆಗಳಿಗೆ ಪರಿಹಾರವನ್ನು ಹಂತ ಹಂತವಾಗಿ ಕಂಡು ಕೊಳ್ಳುವ ಅಗತ್ಯವಿದೆ. ಚುನಾವಣೆಯ ಹಂತದಲ್ಲಿ ಪರ ವಿರೋಧದ ಹೇಳಿಕೆಗಳು ಬರುವುದು ಸಾಮಾನ್ಯವಾಗಿದ್ದು, ಗೆದ್ದು ಕ್ಷೇತ್ರದ ಜನಪ್ರತಿನಿಧಿ ಎನಿಸಿಕೊಂಡ ಬಳಿಕ ಇಬ್ಬರು ನೂತನ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕಾರ್ಯನಿರ್ವಹಿಸುವ ಆಶಯವನ್ನು ವೀಣಾ ಅಚ್ಚಯ್ಯ ವ್ಯಕ್ತಪಡಿಸಿದರು.
ನೂತನ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ ಚುರುಕು ನೀಡುವ ಕೆಲಸವನ್ನು ಮಾಡುವುದರೊಂದಿಗೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ವಿವಿಧ ಇಲಾಖೆಗಳಲ್ಲಿ ಅಗತ್ಯ ಕೆಲಸ ಕಾರ್ಯಗಳಿಗೆ ಶ್ರೀಸಾಮಾನ್ಯ ಸಂಕಷ್ಟವನ್ನು ಎದುರಿಸುತ್ತಿದ್ದು, ಕೆಲಸಕ್ಕಾಗಿನ ಜನರ ಅಲೆದಾಟ ತಪ್ಪಿಸಲು, ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನ ಕಾರ್ಯ ನಡೆಯಬೇಕು, ಅಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾರ್ಯವನ್ನು ನೂತನ ಜನಪ್ರತಿನಿಧಿಗಳು ಮಾಡುವಂತಾಗಲೆಂದು ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿನ ಮಧ್ಯವರ್ತಿಗಳ ಹಾವಳಿ, ಲಂಚ ರುಷುವತ್ತುಗಳಿಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಯ ಕಾಳಜಿ ಇಲ್ಲದ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶವಿಲ್ಲವೆಂದು ದೃಢವಾಗಿ ನುಡಿದು, ನೂತನ ಜನಪ್ರತಿನಿಧಿಗಳು ಕೊಡಗಿನ ಆನೆ ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ, ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮೊದಲಾದ ಜನಪರವಾದ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾಂಗ್ರೆಸ್ ಮುಖಂಡರಾದ ಬೊಳ್ಳಜಿರ ಅಯ್ಯಪ್ಪ ಉಪಸ್ಥಿತರಿದ್ದರು.
Breaking News
- *ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ*
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕಟ್ಟೆಮಾಡು ಪ್ರಕರಣ : ಉಸ್ತುವಾರಿ ಸಚಿವರು, ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಲಿ*
- *ವಸತಿ ಸಚಿವರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತ ಮುಖಂಡರು : ಮೂಲ ಸೌಕರ್ಯಗಳ ಕುರಿತು ಚರ್ಚೆ*
- *ಎಂ.ಎಂ.ಸುಪ್ರಿತಾಗೆ ಚಿನ್ನದ ಪದಕ*
- *ಜ.25 ರಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ*
- *ಸುಂಟಿಕೊಪ್ಪ : ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ : ಎ.ಲೋಕೇಶ್ ಕುಮಾರ್*
- *ಮಡಿಕೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ*
- *ಮಡಿಕೇರಿಯಲ್ಲಿ ಪರಾಕ್ರಮ್ ದಿವಸ್ ಆಚರಣೆ : ಪರೀಕ್ಷಾ ಪೇ ಚರ್ಚಾ 9ನೇ ಆವೃತ್ತಿ*
- *ಕಳೆದು ಹೋಗಿದೆ*