ಮಡಿಕೇರಿ ಮೇ 16 : ಕಾಡಾನೆ ದಾಳಿಯಿಂದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ಪಾಲಿಬೆಟ್ಟದ ನಿವಾಸಿ ಬಾಬಿ(58) ಎಂಬವರೆ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದು, ಇವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿಬೆಟ್ಟದ ಮಸ್ಕಲ್ ಕಾಫಿ ತೋಟದಲ್ಲಿ ಬಾಬಿ ಮತ್ತು ಇನ್ನಿತರ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ಈ ಸಂದರ್ಭ ಕಾಡಾನೆಯ ನೇರ ದಾಳಿಗೆ ಸಿಲುಕಿದ ಬಾಬಿ ಅವರ ಎದೆ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ತಕ್ಷಣ ಸಮೀಪದ ಆರ್‍ಐಹೆಚ್‍ಪಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅರಣ್ಯ ಅಧಿಕಾರಿಗಳ ಭೇಟಿ : ಘಟನಾ ಸ್ಥಳಕ್ಕೆ ಡಿಎಫ್‍ಒ ಶರಣ ಬಸಪ್ಪ, ಎಸಿಎಫ್ ನೆಹರು, ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ, ಅರಣ್ಯ ಅಧಿಕಾರಿ ಕಳ್ಳಿರ ಎಂ. ದೇವಯ್ಯ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಾಬಿ ಅವರ ಚಿಕಿತ್ಸಾ ವೆಚ್ಚವನ್ನು ಇಲಾಖೆ ವತಿಯಿಂದಲೆ ಭರಿಸುವುದಾಗಿ ಅಧಿಕಾರಿಗಳು ಈ ಸಂದರ್ಭ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.
ತೋಟದಲ್ಲಿರುವ ಆನೆಗಳನ್ನು ಅರಣ್ಯಕ್ಕೆ ಅಟ್ಟಿ : ಪಾಲಿಬೆಟ್ಟ ವ್ಯಾಪ್ತಿಯ ಹಲವೆಡೆಗಳಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾರ್ಮಿಕರು ನಿರಂತರವಾಗಿ ಇವುಗಳ ದಾಳಿಗೆ ಒಳಗಾಗುವ ಘಟನೆಗಳು ನಡೆಯುತ್ತಿವೆ.ಇದರಿಂದ ತೊಟಗಳಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಈ ಹಿನ್ನೆಲೆ ತೋಟಗಳಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಹಲ ಗ್ರಾಮಸ್ಥರು ಅರಣ್ಯ ಇಲಾಖಾ ಅಧಿಕಾರಿಗಳನ್ನು ಆಗ್ರಹಿಸಿದ ಘಟನೆ ನಡೆಯಿತು.