ನಾಪೋಕ್ಲು ಮೇ 20 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಆಯೋಜಿಸಲಾದ 23ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಪ್ರಾಂಶುಪಾಲೆ ಡಾ. ಅವನಿಜ ಸೋಮಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ, ಈ ವರ್ಷದ ಬೇಸಿಗೆ ಶಿಬಿರದ ತರಬೇತಿಯಲ್ಲಿ 80 ಮಕ್ಕಳು ಭಾಗವಹಿಸಿದ್ದು, ಸುಮಾರು ಒಂದು ತಿಂಗಳಕಾಲ ಹಾಕಿ ಸೇರಿದಂತೆ ವಿವಿಧ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳ ತರಬೇತಿಯನ್ನು ಶಿಬಿರಾರ್ಥಿಗಳಿಗೆ ನೀಡಲಾಗಿದೆ. ಶಿಬಿರಲ್ಲಿ ಭಾಗವಹಿಸುವುದರಿಂದ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ. ನಮ್ಮಲ್ಲಿ ಈ ಹಿಂದೆ ತರಬೇತಿ ಪಡೆದ ಅನೇಕ ಶಿಬಿರಾರ್ಥಿಗಳು ಉತ್ತಮ ಸ್ಥಾನ ಮಾನವನ್ನು ಅಲಂಕರಿಸಿದ್ದು, ಅಕಾಡೆಮಿಗೆ ಗೌರವ ತಂದಂತಾಗಿದೆ ಎಂದರು.
ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಕುಂದ್ಯೋಳಂಡ ಗಣೇಶ್ ಮುತ್ತಪ್ಪ ಮಾತನಾಡಿ, ಮಕ್ಕಳು ಜೀವನದಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಕಿವಿಮಾತು ಹೇಳಿದರು. ಮತ್ತೋರ್ವ ಅತಿಥಿ ಸ್ಥಳಿಯ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೇಟ್ಟಿರ ರೇಷ್ಮಾ ಉತ್ತಪ್ಪ ಮಾತನಾಡಿ, ಇಂತಹ ಶಿಬಿರ ಗಳಿಂದ ಮಕ್ಕಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿದೆ. ಇದರ ಸದುಪಯೋಗ ಪಡೆದುಕೊಂಡು ಅಕಾಡೆಮಿಗೆ ಹಾಗೂ ರಾಷ್ಟ್ರಕ್ಕೆ ಉತ್ತಮ ಕೀರ್ತಿ ತಂದು ಜೀವನವನ್ನು ಸಾರ್ಥಕಗೊಳಿಸುವಂತಾಗಲಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ, ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಲಯನ್ಸ್ ಚೇರ್ಮನ್ ಮುಕ್ಕಾಟಿರ ವಿನಯ್, ಬಿದ್ದಾಟಂಡ ಮಮತಾ ಚಿನ್ನಪ್ಪ, ಎಳ್ತಂಡ ಸಾಬಾ ಬೋಪಣ್ಣ , ಬಿದ್ದಾಟಂಡ ಜಿನ್ನು ನಾಣಯ್ಯ, ಕೊಂಡಿರ ನಾಣಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು .
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ವಿವಿಧ ಕ್ರೀಡಾ ಚಟುವಟಿಕೆಗಳ ಪ್ರದರ್ಶನ ಮತ್ತು ಅತಿಥಿಗಳಿಗೆ ಗೌರವ ರಕ್ಷೆ ಸಮರ್ಪಿಸಲಾಯಿತು. ಬಳಿಕ ಶಿಬಿರಾರ್ಥಿಗಳಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿ ಗೌರವಿಸಿದರು.
ಈ ಸಂದರ್ಭ ಅಕಾಡೆಮಿಯ ಖಜಾಂಜಿ ಮಾಚೇಟಿರ ಕುಶು ಕುಶಾಲಪ್ಪ, ತರಬೇತುದಾರರಾದ ಕೇಟೋಳಿರ ಡಾಲಿ ಅಪ್ಪಚ್ಚ, ಅರೆಯಡ ಗಣೇಶ್ ಬೆಳ್ಳಿಯಪ್ಪ, ಚೆಟ್ಟಿಯಾರಂಡ ದಿಲನ್, ಧೀರಜ್, ಎಲ್ಲಾ ನಿರ್ದೇಶಕರು, ಮಕ್ಕಳ ಪೋಷಕರು, ಮತ್ತಿತರರು ಉಪಸ್ಥಿತರಿದ್ದರು.
ವರದಿ :ಝಕರಿಯ ನಾಪೋಕ್ಲು








