ಸುಂಟಿಕೊಪ್ಪ ಮೇ 20 : ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ.ಶಾಲಾ ಮೈದಾನದಲ್ಲಿ 25ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ದೊರೆಯಿತು.
ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಬ್ಲೂ ಬಾಯ್ಸ್ ಯೂತ್ ಕ್ಲಬ್ ಮತ್ತು ಪನ್ಯ ಎಫ್.ಸಿ. ಪನ್ಯ ತಂಡಗಳ ನಡುವಿನ ಪಂದ್ಯಾವಳಿಯನ್ನು ಚೆಂಡು ಹೊದೆಯುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಸುಂಟಿಕೊಪ್ಪ ಪಿಎಸ್‍ಐ ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ರಫೀಕ್ ಖಾನ್, ಪಿ.ಎಫ್.ಸಭಾಸ್ಟೀನ್, ಶಬೀರ್, ವಸಂತಿ, ಶಾಂತಿ, ಬ್ಲೂ ಬಾಯ್ಸ್ ಯುವಕ ಸಂಘದ ಸ್ಥಾಪಕಾಧ್ಯಕ್ಷ ಜೆರ್ಮಿ ಡಿಸೋಜ,ಅಧ್ಯಕ್ಷ ಆಲಿಕುಟ್ಟಿ, ಹಿರಿಯ ಆಟಗಾರರಾದ ಕೆ.ಪಿ.ಜಗನ್ನಾಥ್, ಪ್ಯಾಟ್ರಿಕ್, ಎನ್.ಎಸ್.ದೇವಪ್ಪ, ಶುಂಠಿ ರಾಮಣ್ಣ, ಎನ್.ಎಸ್.ಸೋಮಣ್ಣ, ಆದಿಶೇಷ, ಬೆಟ್ಟಗೇರಿ ತೋಟದ ವ್ಯವಸ್ಥಾಪಕ ಚಂಗಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಪಂದ್ಯಾವಳಿಯ ಸಂಚಾಲಕ ಟಿ.ವಿ. ಪ್ರಸನ್ನ ಹಾಜರಿದ್ದರು.
ಬ್ಲೂ ಬಾಯ್ಸ್ ಮತ್ತು ಪನ್ಯ ಎಫ್.ಸಿ ಪನ್ಯ ತಂಡದ ನಡುವೆ ನಡೆದು ಪಂದ್ಯದ ಮೊದಲಾರ್ಧದ 11ನೇ ನಿಮಿಷದಲ್ಲಿ ಬಿಬಿಸಿ ತಂಡದ ಮುನ್ನಡೆ ಆಟಗಾರ ವೇಣುಗೋಪಾಲ್ ಅವರು ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅದರಂತೆ ಪಂದ್ಯದ ಮೊದಲಾರ್ಧದಲ್ಲಿ 1-0 ಗೋಲುಗಳಿಂದ ಬಿಬಿಸಿ ತಂಡ ಮುನ್ನಡೆ ಪಡೆದುಕೊಂಡಿತು.
ಪಂದ್ಯದ ದ್ವಿತೀಯಾರ್ಧದಲ್ಲಿ 2 ತಂಡಗಳು ಉತ್ತಮ ಆಟವನ್ನು ಪ್ರದರ್ಶಿಸಿದರೂ ಯಾವುದೇ ಗೋಲು ಬರಲಿಲ್ಲ. ಕೊನೆಗೆ ಬಿಬಿಸಿ ತಂಡ 1-0 ಗೋಲುಗಳಿಂದ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ನಂತರ ಅಮಿಟಿ ಎಫ್.ಸಿ ಗದ್ದೆಹಳ್ಳ ಮತ್ತು ನೇತಾಜಿ ಯುವಕ ಸಂಘ ಕೊಡಗರಹಳ್ಳಿ ತಂಡಗಳ ನಡುವೆ ನಡೆದ ಎರಡನೇ ಪಂದ್ಯದಲ್ಲಿ ಗದ್ದೆಹಳ್ಳ ತಂಡವು 2-1 ಗೋಲುಗಳಿಂದ ಕೊಡಗರಹಳ್ಳಿ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿತು.
ಪಂದ್ಯದ ಮೊದಲಾರ್ಧದಲ್ಲಿ ಅಮಿಟಿ ಗದ್ದೆಹಳ್ಳ ತಂಡದ ಆಟಗಾರರು ಮೊದಲಾರ್ಧದ 6ನೇ ನಿಮಿಷದಲ್ಲಿ ಮಾಡಿದ ಸಣ್ಣ ತಪ್ಪು ಸ್ವಯಂಪ್ರೇರಿತ ಗೋಲಾಗಿ ಪರಿವರ್ತನೆಗೊಂಡು ಕೊಡಗರಹಳ್ಳಿ ತಂಡ 1 ಗೋಲುಗಳ ಮುನ್ನಡೆ ಪಡೆಯಿತು.
ದ್ವಿತೀಯಾರ್ಧದಲ್ಲಿ ಅಮಿಟಿ ತಂಡದ ಆಟಗಾರ ಮಸೂದ್ ಮತ್ತು ಚಂದ್ರ ಅವರು ಕೊನೆಯ ಕ್ಷಣದಲ್ಲಿ ಗೋಲು ಬಾರಿಸುವ ಮೂಲಕ ಅಮಿಟಿ ಗದ್ದೆಹಳ್ಳ ತಂಡ 2-1 ಗೋಲುಗಳ ವಿಜಯದ ನಗೆ ಬೀರಿತು.