ಮಡಿಕೇರಿ ಮೇ 20 : ಕೊಡಗಿನ ವೈಶಿಷ್ಟ್ಯಪರ್ಣ ಭಾಷಾ ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ‘ಕೊಡವ ಯುವ ಮೇಳ’ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ, ಅತ್ಯಾಕರ್ಷಕ ಮೆರವಣಿಗೆ, ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಮಯವಾಗಿ ನಡೆಯಿತು.
ಕೊಡವ ಸಂಸ್ಕೃತಿಯ ಸಂರಕ್ಷಣೆ ಯುವ ಸಮೂಹದಿಂದ ಮಾತ್ರ ಸಾಧ್ಯವಾಗಬಲ್ಲುದು, ಈ ಹಿನ್ನೆಲೆ ಜಿಲ್ಲೆ ಹಾಗೂ ಕಾರ್ಯ ನಿಮಿತ್ತ ಹೊರ ಜಿಲ್ಲೆಗಳಲ್ಲಿರುವ ಯುವ ಸಮೂಹಕ್ಕೆ ಇಲ್ಲಿನ ಸಂಪದ್ಭರಿತ ಸಂಸ್ಕೃತಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್‍ನಿಂದ ದಿನಪೂರ್ತಿ ಕೊಡವ ಭಾಷಾ ಸಂಸ್ಕೃತಿಯ ಚೌಕಟ್ಟಿನಲ್ಲಿ ಅತ್ಯಾಕರ್ಷಕ ಕಾರ್ಯಕ್ರಮಗಳು ನಡೆದವು.
ಆಕರ್ಷಕ ಮೆರವಣಿಗೆ- ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಟ್ರಸ್ಟ್‍ನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪದಾಧಿಕಾರಿಗಳಾದ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಸದಸ್ಯರಾದ ಮಲ್ಲಮಾಡ ಪ್ರಭು ಪೂಣಚ್ಚ, ಪಾಲೇಂಗಡ ಅಮಿತ್ ಭೀಮಯ್ಯ, ಅಪ್ಪಂಡೇರಂಡ ಯಶವಂತ್ ಕಾಳಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಶನಿವಾರ ಬೆಳಗ್ಗೆ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಕೊಡವ ಜನಾಂಗದ ಸಾಧಕರ ಭಾವಚಿತ್ರಗಳೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಯುವಕರು, ಯುವತಿಯರು, ಕೊಡವ ಪರಂಪರೆಯ ಸಂಕೇತವಾದ ಕೋವಿಯನ್ನು ಹಿಡಿದು ಗತ್ತಿನಿಂದ ಮೆರವಣಿಗೆಯಲ್ಲಿ ಗತ್ತಿನಿಂದ ಹೆಜ್ಜೆ ಹಾಕಿದ ಪುರುಷರು ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿದರು.
ಮೆರವಣಿಗೆಯಲ್ಲಿ ಹಲವಾರು ಮಂದಿ ಬೈಕ್ ಜಾಥ ನಡೆಸಿ ಕುತೂಹಲ ಮೂಡಿಸಿದರೆ, ದುಡಿಕೊಟ್ಟ್ ಪಾಟ್, ಕೊಂಬು ಕೊಟ್ಟ್ ವಾಲಗಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಹಲವರು ಮೆರವಣಿಗೆಯ ಕಳೆ ಹೆಚ್ಚಿಸಿದರೆ, ಸಾಂಪ್ರದಾಯಿಕ ಒಡಿಕತ್ತಿ ಹಿಡಿದು ಶಿಸ್ತಿನಿಂದ ಹೆಜ್ಜೆ ಹಾಕಿದ ಮಂದಿ ಕೊಡವ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪಸರಿಸಿದರು.
ತೆರೆದ ವಾಹನದಲ್ಲಿ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಸಾಧಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಕೊಡವ ವಾಲಗಕ್ಕೆ ಯುವ ಸಮುದಾಯ ಕುಣಿದು ಕುಪ್ಪಳಿಸಿತು.
ಮಾಲಾರ್ಪಣೆ- ಇಂದಿರಾಗಾಂಧಿ ವೃತ್ತ ಹಾಗೂ ಹಳೇ ಖಾಸಗಿ ಬಸ್‍ನಿಲ್ದಾಣದ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಮೆರವಣಿಗೆಯು ಆಗಮಿಸಿದ ಸಂದರ್ಭ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮೆರವಣಿಗೆ ಸಂದರ್ಭ ಸ್ವಾಡ್ರನ್‍ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ, ಮಂಗೇರಿರ ಮತ್ತಣ್ಣ ಪ್ರತಿಮೆ, ಜನರಲ್ ತಿಮ್ಮಯ್ಯ ಪ್ರತಿಮೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಕ್ರಿಸ್ಟಲ್ ಕೋರ್ಟ್‍ವರೆಗೆ ಸಾಗಿಬಂತು.
ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಅಲ್ಲದೇ ಬೆಂಗಳೂರು, ಮೈಸೂರು, ಮಂಗಳೂರು ಮತ್ತಿತರರ ಕಡೆಗಳಿಂದಲೂ ಕೊಡವ ಜನಾಂಗದವರು ಪಾಲ್ಗೊಂಡದ್ದು ವಿಶೇಷ.
ಕೊಡವ ಸಂಸ್ಕೃತಿಯನ್ನು ಮರೆಯದಿರಿ- ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರು ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಮಾತನಾಡಿ, ಕೊಡಗಿನ ಸಂಸ್ಕೃತಿ, ಪರಂಪರೆಗಳನ್ನು ಯುವ ಸಮೂಹ ಎಂದಿಗೂ ಮರೆಯಕೂಡದು. ಅದೇ ಕೊಡವ ಸಮುದಾಯದ ತಾಯಿಬೇರು ಎಂದು ಈ ನೆಲದ ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು
ಸನ್ಮಾನ- ಮಧ್ಯಾಹ್ನ ಕ್ರಿಸ್ಟಲ್ ಕೊರ್ಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು ಕೊಡವ ಸಂಸ್ಕೃತಿಯ ಬಗ್ಗೆ ಮಾತನಾಡಿದರೆ, ವಿವಿಧ ತಂಡಗಳು ಕೊಡಗಿನ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು.












