ಮಡಿಕೇರಿ ಮೇ 20 : ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಅರೆಭಾಷಿಕ ಗೌಡ ಜನಾಂಗದವರಿಗೆ ಆಯೋಜಿಸಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡರ ಕ್ರಿಕೆಟ್ ಸಂಭ್ರಮಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‍ನ ಅಂಡರ್ 15 ಆಟಗಾರ್ತಿ ಜೈನೀರ ತಾನಿಷ್ಕಾ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ್ ಮಾತನಾಡಿ, ಅರಂಭದಲ್ಲಿ ಗೌಡ ಜನಾಂಗ ಬಾಂಧವರಿಗೆ ಟೆನ್ನಿಸ್ ಬಾಲ್ ಪಂದ್ಯ ಆಯೋಜಿಸಲಾಗುತ್ತಿತ್ತು. ಬದಲಾವಣೆಗಾಗಿ ಈ ಬಾರಿ ಯುವ ವೇದಿಕೆ ವತಿಯಿಂದ ಲೆದರ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಸಂತೋಷ. ಪ್ರಸ್ತುತ ದಿನಗಳಲ್ಲಿ ಬದಲಾವಣೆಯ ಅಗತ್ಯವಿದ್ದು, ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯಾಗಿದೆ ಎಂದ ಅವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಕೊಡಗಿನ ಜನತೆಗೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರು ಹುರುಪಿನಿಂದ ಜನಾಂಗದ ಹಿರಿಮೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕು. ಈ ಪಂದ್ಯಾವಳಿಯಿಂದ ಜನಾಂಗ ಹಾಗೂ ಜನತೆಗೆ ಉತ್ತೇಜನ ನೀಡುವಂತಾಗಬೇಕು ಎಂದರು.
ಕ್ರೀಡಾ ಸಮಿತಿ ಅಧ್ಯಕ್ಷ ಬಾಲಾಡಿ ಮನೋಜ್ ಮಾತನಾಡಿ, ಈ ಮೊದಲು ಆಯೋಜಿಸುತ್ತಿದ್ದ ಟೆನ್ನಿಸ್ ಬಾಲ್ ಪಂದ್ಯದಿಂದ ಕುಟುಂಬಸ್ಥರು ಸಮ್ಮಿಲನಕ್ಕೆ ಸಹಕಾರಿಯಾಗಿತ್ತು.ಆದರೆ, ಪ್ರತಿಭೆಗಳನ್ನು ಗುರುತಿಸಲು ಲೆದರ್ ಬಾಲ್ ಅವಶ್ಯಕವಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಮಿತಿ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಹಾಗೂ ಪದಾಧಿಕಾರಿಗಳು ಹಾಜರಿದ್ದರು.










