ಮಡಿಕೇರಿ ಮೇ 20 : ನಗರಸಭೆ ವತಿಯಿಂದ ಟೌನ್ ಹಾಲ್ ಬಳಿಯಲ್ಲಿ ಆರ್‍ಆರ್‍ಆರ್ ಕೇಂದ್ರವನ್ನು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಪೌರಾಯುಕ್ತ ವಿಜಯ ಹಾಗೂ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಸೇರಿ ಕಸ ಸಂಗ್ರಹಣೆ ಹಾಗೂ ತ್ಯಾಜ್ಯವನ್ನು ನೀಡುವ ಮೂಲಕ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ನಗರಸಭೆ ಪೌರಾಯುಕ್ತ ವಿಜಯ್ ಮಾತನಾಡಿ ತಮ್ಮ ಮನೆಗಳಲ್ಲಿ ಇರುವ ತ್ಯಾಜ್ಯವನ್ನು ಆರ್‍ಆರ್‍ಆರ್ ಕೇಂದ್ರಗಳಿಗೆ ನೀಡಿದ್ದಲ್ಲಿ, ಈ ತ್ಯಾಜ್ಯಗಳಲ್ಲಿ ಉಪಯೋಗವಾಗುವ ಅವಶ್ಯವಿರುವವರಿಗೆ ಉಪಯೋಗಕ್ಕಾಗಿ ನೀಡಲಾಗುತ್ತದೆ. ಇನ್ನುಳಿದ ತ್ಯಾಜ್ಯವನ್ನು ಮರು ಬಳಕೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2 ಅಡಿಯಲ್ಲಿ ಜೂ.5 ರವರೆಗೆ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್‍ಆರ್‍ಆರ್(ರೆಡ್ಯೂಸ್, ರೆಸ್ಕ್ಯೂ, ರೀ ಸೈಕಲ್) ಕೇಂದ್ರಗಳನ್ನು ನಗರ ವ್ಯಾಪ್ತಿಯಲ್ಲಿ 5 ಸ್ಥಳಗಳಲ್ಲಿ ಮಡಿಕೇರಿ ನಗರಸಭೆ ವತಿಯಿಂದ ತೆರೆಯಲಾಗಿದೆ.
ಸಾರ್ವಜನಿಕರು (ಆಟಿಕೆ ಸಾಮಾಗ್ರಿಗಳು, ಬಟ್ಟೆ-ಹಳೆಯ ಜೀನ್ಸ್, ಸಮವಸ್ತ್ರ, ಸೀರೆಗಳು ಇತರೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು, ಎಲೆಕ್ಟ್ರಾನಿಕ್ ವಸ್ತುಗಳು) 6 ವಿಧದ ನಿರುಪಯುಕ್ತ ವಸ್ತುಗಳನ್ನು ಸಾರ್ವಜನಿಕರಿಂದ ಈ ಆರ್‍ಆರ್‍ಆರ್ ಕೇಂದ್ರಗಳಿಗೆ ದೇಣಿಗೆಯಾಗಿ ಪಡೆಯುವುದರ ಮೂಲಕ ಈ ವಸ್ತುಗಳನ್ನು ಅಗತ್ಯವಿರುವವರಿಗೆ ಉಪಯೋಗಕ್ಕಾಗಿ ನೀಡಲಾಗುವುದು. ಹಾಗೂ ಇನ್ನುಳಿದ ತ್ಯಾಜ್ಯವನ್ನು ಮರು ಬಳಕೆಗೆ ಕಳುಹಿಸಿಕೊಡಲಾಗುವುದು. ಈ ಒಂದು ಉಪಯುಕ್ತ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹ ಕಾಣಿಕೆ ನೀಡುವುದನ್ನು ಪಡೆಯಲು ಕೋರಿದೆ.
ಸ್ಥಾಪಿತ ಆರ್‍ಆರ್‍ಆರ್ ಕೇಂದ್ರಗಳ ವಿವರ: ಟೌನ್‍ಹಾಲ್ ಹತ್ತಿರ, ಚಾಮುಂಡೇಶ್ವರಿ ನಗರ ಸಮುದಾಯ ಭವನ, ಪಂಪ್‍ಹೌಸ್, ಮೈತ್ರಿ ಹಾಲ್ ಹತ್ತಿರ, ಎ.ವಿ.ಶಾಲೆ ಮಹದೇವಪೇಟೆ ಹಾಗೂ ಹಿಂದೂಸ್ಥಾನ ಶಾಲೆ, ಕನಕದಾಸ ರಸ್ತೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.








