ನಾಪೋಕ್ಲು ಮೇ 22 : ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಅಂತಿಮ ಪಂದ್ಯದಲ್ಲಿ ಚೆಕ್ಕೆರ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಅಟ್ರಂಗಡ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.
ಕ್ರಿಕೆಟ್ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆಕ್ಕೆರ ತಂಡ ಒಂದು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಅಟ್ರಂಗಡ ತಂಡಕ್ಕೆ 153 ರನ್ ಗುರಿ ನೀಡಿತು. ಉತ್ತರವಾಗಿ ಆಡಿದ ಅಟ್ರಂಗಡ ತಂಡ 3 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಸೋಲನ್ನು ಅನುಭವಿಸಿತು. ಆ ಮೂಲಕ ಅಟ್ರಂಗಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು. ವಿಜೇತ ತಂಡಕ್ಕೆ ರೂ. 75,000 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ರನ್ನರ್ ಅಪ್ ಸ್ಥಾನ ಪಡೆದ ಅಟ್ರಂಗಡ ತಂಡಕ್ಕೆ ರೂ.50,000 ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
ಇದಕ್ಕೂ ಮುನ್ನ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಮಂಡುವಂಡ ಹಾಗೂ ಮಾಳೇಟಿರ ತಂಡಗಳ ನಡುವೆ ಪಂದ್ಯ ನಡೆಯಿತು. ಮಂಡುವಂಡ ತಂಡ ಐದು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿ ಮಾಳೇಟಿರ ತಂಡಕ್ಕೆ 59 ರನ್ ಗುರಿ ನೀಡಿತು. ಮಾಳೇಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿ ಗೆಲುವು ಸಾಧಿಸಿತು. ಮಾಳೇಟಿರ ತಂಡದವರು ಮೂರನೇ ಸ್ಥಾನವನ್ನು ಮಂಡುವಂಡ ತಂಡದವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.













