ನಾಪೋಕ್ಲು ಮೇ 25 : ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು.
ಮಧ್ಯಾಹ್ನ ಸುಮಾರು ಒಂದು ಗಂಟೆಗಳ ಕಾಲ ಬಿರುಸಿನ ಮಳೆಯಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಸುತ್ತಲಿನ ಮಣ್ಣು ಕಲ್ಲುಗಳೆಲ್ಲ ರಭಸದ ಮಳೆಗೆ ಕೊಚ್ಚಿಕೊಂಡು ಮುಖ್ಯ ರಸ್ತೆಗೆ ಬಂದ ಪರಿಣಾಮ ಚಾಲಕರು, ಜನಸಾಮಾನ್ಯರು ತೊಂದರೆ ಅನುಭವಿಸಿದರು.
ಮುಖ್ಯ ರಸ್ತೆ ಉದ್ದಕ್ಕೂ ಕೆಸರು ನೀರು ಹರಿದ ಪರಿಣಾಮ ವಾಹನ ಸಂಚಾರ ದುಸ್ತರವಾಗಿ ಜನರು ಸಮಸ್ಯೆ ಅನುಭವಿಸಿದರು. ಮುಖ್ಯ ರಸ್ತೆ ಕೆಳಭಾಗದಲ್ಲಿದ್ದ ಮನೆಗಳ ಅಂಗಳಕ್ಕೆ ಕೆಸರು ನೀರು ಹರಿದು ಜನರು ಪರದಾಡವಂತಾಯಿತು.
ವರದಿ : ದುಗ್ಗಳ ಸದಾನಂದ