ಸುಂಟಿಕೊಪ್ಪ, NEWS DESK ನ.20: ರಾಜ್ಯ ಮಟ್ಟದಲ್ಲಿ ಅನೇಕ ಸಂಘಟನೆಗಳು ಕನ್ನಡದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕನ್ನಡದ ಹಿತರಕ್ಷಣೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಅಭಿಪ್ರಾಯಪಟ್ಟರು.
ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ಸುಂಟಿಕೊಪ್ಪದ ಮೀನಾಕ್ಷಮ್ಮ ಮಂಜನಾಥಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ, ನಾಡು-ನುಡಿಯ ಬೆಳವಣಿಗೆಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸಬೇಕು. ಕೇವಲ ಕಾರ್ಯಕ್ರಮಗಳನ್ನು ಆಯೋಜಿಸಿ ತೆರಳುವುದಕ್ಕಿಂತ, ಸಂಘಟನೆಯ ಮೂಲಕ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಕಾರ್ಯರೂಪದಲ್ಲಿ ತೋರಿಸಬೇಕು. ಕನ್ನಡದ ನಿಜವಾದ ರಕ್ಷಣೆಗೆ ಸ್ವಾಭಿಮಾನದಿಂದ ಕೆಲಸ ಮಾಡುವುದು ಅಗತ್ಯವಾಗಿದ್ದು, ಸ್ವಾಭಿಮಾನವಿದ್ದಾಗ ಮಾತ್ರ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು, ಸಂಘಟನೆಯ ಬೆಳವಣಿಗೆ ಹಾಗೂ ನಡೆದು ಬಂದ ಹಾದಿಯ ಕುರಿತು ವಿವರಿಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಹಾಗೂ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ವೈಷ್ಣವಿ, ಆರ್. ಅಜಯ್, ಪಿ.ಆರ್. ನಂದಿನಿ ಹಾಗೂ ಶೋಭಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎ. ಲೋಕೇಶ್ ಕುಮಾರ್, ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಕಾರ್ಯದರ್ಶಿ ಕೆ.ಎಸ್. ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿನಾಸುದ್ದೀನ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶರೀಫ್, ರಕ್ತದಾನ ಶಿಬಿರದ ಕಾರ್ಯಕರ್ತರಾದ ಎಂ.ಇ. ಅಬ್ಬಾಸ್ ಮತ್ತು ಕುಂಞ ಮಹಮ್ಮದ್, ಹಿರಿಯ ಆಟೋ ಚಾಲಕರು, ಜಯಂತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ ಹಾಗೂ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರಾಡ್ರಿಗಸ್, ಹೋಬಳಿ ಘಟಕದ ಅಧ್ಯಕ್ಷ ಶರೀಫ್ ಎಂ.ಇ., ಪದಾಧಿಕಾರಿಗಳಾದ ಶಹಾದ್, ನಿತಿನ್ ಮಂದಣ, ಮಡೆ ಪೂಜಾರಿ, ರವಿ, ದಿನೀತ್ ಸೇರಿದಂತೆ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
















