ವಿರಾಜಪೇಟೆ ಮೇ 31 : ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಿ ಮಕ್ಕಳನ್ನು ಸ್ವಾಗತಿಸಲಾಯಿತು.
ಶಾಲೆಯನ್ನು ತಳಿರು ತೋರಣ ಹಾಗೂ ಹೂವುಗಳಿಂದ ಶೃಂಗರಿಸಲಾಗಿತ್ತು. ಸಂತ ಅನ್ನಮ್ಮ ದೇವಾಲಯದ ಗುರುಗಳಾದ ರೆ. ಫಾ. ದಯಾನಂದ ಪ್ರಭು ಆಶೀರ್ವಚನವನ್ನು ನೀಡಿದರು.
ಸಹಾಯಕ ಗುರುಗಳಾದ ರೆ.ಫಾ. ಯೇಸು ಪ್ರಸಾದ್ ಧಾರ್ಮಿಕ ಗ್ರಂಥವನ್ನು ಪಠಿಸಿದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಕರ್ ಮಾತನಾಡಿ, ಈ ವಿದ್ಯಾಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ಬಾರಿ ಒಂದು ಹೊಸ ಶಾಲಾ ಬಸ್‍ನ್ನು ಖರೀದಿಸಿ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಾಗಿದ್ದು, ಪ್ರಸ್ತುತದಲ್ಲಿ ಎರಡು ಶಾಲಾ ಬಸ್‍ಗಳು ಗ್ರಾಮೀಣ ಭಾಗಕ್ಕೆ ಸಂಚಾರ ಮಾಡುತ್ತಿದೆ ಎಂದರು.
ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಅಭಿನಂದಿಸಲಾಯಿತು. ಅಲ್ಲದೇ ಎಸ್.ಎಸ್.ಎಲ್.ಸಿ.ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾದ್ಯಾಯರುಗಳು, ಶಿಕ್ಷಕರು ಈ ಸಂದರ್ಭ ಹಾಜರಿದ್ದರು.
ಮಕ್ಕಳನ್ನು ಶಿಕ್ಷಕರು ಹೂವು ನೀಡುವುದರ ಮೂಲಕ ಸ್ವಾಗತಿಸಿ, ಸಿಹಿ ಹಂಚಿದರು.









