ಮಡಿಕೇರಿ ಮೇ ಜೂ.1 : ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲವಾಗಿರುವ ಕುಂಡಾಮೇಸ್ತ್ರಿ ಯೋಜನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ಘಟಕ ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದೆ.
ಸಂಘದ ತಾಲ್ಲೂಕು ಸಂಚಾಲಕ ಲಕ್ಷ್ಮಣ್ ಗರಗಂದೂರು ಅವರು ಮಡಿಕೇರಿಯಲ್ಲಿ ಸಂಸದರನ್ನು ಭೇಟಿಯಾಗಿ ಬೇಡಿಕೆಗಳ ಕುರಿತು ಗಮನ ಸೆಳೆದರು.
ಮಡಿಕೇರಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸಲು ಕೆಲವು ವರ್ಷಗಳ ಹಿಂದೆ ಬೇತ್ರಿ ಯೋನೆಯನ್ನು ರೂಪಿಸಲಾಗಿತ್ತು. ಆದರೆ ಕೆಲವು ಜನಪ್ರತಿನಿಧಿಗಳ ಸ್ವಹಿತಾಸಕ್ತಿಗಾಗಿ ಕುಂಡಾಮೇಸ್ತ್ರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಯೋಜನೆ ಅನುಷ್ಠಾನಗೊಂಡು 7 ವರ್ಷ ಕಳೆದರೂ ನಗರಕ್ಕೆ ಕುಡಿಯುವ ನೀರಿನ ಭಾಗ್ಯ ದೊರೆತ್ತಿಲ್ಲ. ಬೇಸಿಗೆಯಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ದೌರ್ಭಾಗ್ಯ ತಪ್ಪಿಲ್ಲ ಎಂದು ಆರೋಪಿಸಿದರು.
ತಕ್ಷಣ ಕುಂಡಾಮೇಸ್ತ್ರಿ ಯೋಜನೆಯ ಲೋಪವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಗೆ ರೈಲು ಮಾರ್ಗದ ಸಂಪರ್ಕ ಕಲ್ಪಿಸುವ ಯೋಜನೆ ವಿಳಂಬವಾಗುತ್ತಿದ್ದು, ಇದನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಬೇಕು. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಜಿಲ್ಲಾಧಿಕಾರಿಗಳ ಕಚೇರಿ ತಡೆಗೋಡೆಯ ಅವೈಜ್ಞಾನಿಕ ಕಾಮಗಾರಿಯ ಕುರಿತು ಕೂಡ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು.









