ಸುಂಟಿಕೊಪ್ಪ ಜೂ.7 : ಜಿಲ್ಲೆಯಲ್ಲಿ ಈ ಹಿಂದೆ ಭೂಕುಸಿತ ಉಂಟಾದ ಸಮಯದಿಂದ ಇಲ್ಲಿಯವರೆಗೂ ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ಸಿಸ್ಕೋ ಕಂಪನಿಯು ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳ ಜನತೆಯೊಂದಿಗೆ ಒಡನಾಟವನ್ನಿರಿಸಿಕೊಂಡಿದ್ದು ಅವರಿಗೆ ಅಗತ್ಯ ನೆರವು ಸಹಕಾರಗಳನ್ನು ನೀಡುತ್ತಾ ಬಂದಿದೆ.
ಇತ್ತೀಚೆಗೆ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಮಾದಾಪುರ ಗ್ರಾಮಗಳ ಜನರ ಪರಿಸ್ಥಿತಿ ಅವಲೋಕಿಸಿ ಬೆಂಗಳೂರಿನ ಜಾಗೃತಿ ಸಂಸ್ಥೆ ಮತ್ತು ಸಿಸ್ಕೋ ಕಂಪನಿಯ 84 ಮಂದಿ ಸ್ವಯಂಸೇವಕರ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಡಿತರ ಕಿಟ್, ಹೆಣ್ಣು ಮಕ್ಕಳಿಗೆ ನೈರ್ಮಲ್ಯ ಕಿಟ್, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಾಗ್ರಿಗಳನ್ನು ವಿತರಿಸಿದರು.
ಇದೇ ಸಂದರ್ಭ ಮಾದಾಪುರ ಸರ್ಕಾರಿ ಶಾಲೆಯ ಗೋಡೆಯಲ್ಲಿ ಮಂಡಲ ಚಿತ್ರಗಳನ್ನು ಬಿಡಿಸಲಾಯಿತು. ಇದರಿಂದ ಹಲವು ರೀತಿಯಲ್ಲಿ ದಿನನಿತ್ಯ ಮಕ್ಕಳಿಗೆ ಶಾಲೆಯಲ್ಲಿ ಸಹಾಯವಾಗಲಿದೆ. ಈ ಸಂದರ್ಭ ಸಿಸ್ಕೋ ಕಂಪನಿಯ ಬಾನಂಡ ಸಂಪತ್, ಜಾಗೃತಿ ಸಂಸ್ಥೆಯ ಕಣ್ಣನ್, ಶರಣ್, ನೋಯೇಲ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.