ಮಡಿಕೇರಿ ಜೂ.7 : ಕೊಡಗು ವಿಶ್ವ ವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ವತಿಯಿಂದ ಪೊನ್ನಂಪೇಟೆ ತಾಲ್ಲೂಕಿನ ಕೋತೂರು ಆಶ್ರಮ ಶಾಲೆಯಲ್ಲಿ ಗ್ರಾಮೀಣ ಅಧ್ಯಯನ ಶಿಬಿರ ನಡೆಯಿತು.
ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಆಲೂರ ಉದ್ಘಾಟಿಸಿ ಮಾತನಾಡಿ, ಶಿಬಿರದ ಅವಧಿಯಲ್ಲಿ ಈ ಭಾಗದ ಆದಿವಾಸಿ ಜನರ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಅಧ್ಯಯನ ಮಾಡಿ, ಅದರಲ್ಲಿರುವ ವಿಶೇಷತೆಗಳನ್ನು ತಿಳಿಯುವಂತಾಗಬೇಕು ಎಂದರು.
ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ಅವರಲ್ಲಿ ಸ್ವಲ್ಪವಾದರೂ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಹೆಚ್ಚು ಜವಾಬ್ದಾರಿಯುತವಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು” ಎಂದು ಕರೆ ನೀಡಿದರು.
ಹಾಗೆಯೇ ಆದಿವಾಸಿ ಸಮುದಾಯದಲ್ಲಿ ಅವರದೇ ಆದಂತಹ ವಿಶೇಷವಾದ ದೇಸಿ ಜ್ಞಾನವಿದ್ದು, ಅದು ನಶಿಸಿ ಹೋಗದ ಹಾಗೆ ದಾಖಲಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅರಣ್ಯ ಮಹಾವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎಂ.ಜಡೇಗೌಡ ಮಾತನಾಡಿ, ಆದಿವಾಸಿಗಳ ಶ್ರೇಯೋಭಿವೃದ್ಧಿಯಲ್ಲಿ ವೃತ್ತಿಪರ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಸೀನಪ್ಪ ಮಾತನಾಡಿದರು.
ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು ಬುಡಕಟ್ಟು ಅಭಿವೃದ್ಧಿ ಕಲ್ಯಾಣಾಧಿಕಾರಿ ಡಿ.ಜಿ.ಗುರುಶಾಂತಪ್ಪ, ಕೋತೂರು ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ವಿ.ಎಸ್.ಪ್ರಶಾಂತ್ ಕುಮಾರ್ ಹಾಗೂ ಶಿಕ್ಷಕರು, ಕೊಡಗು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಎಸ್.ಎಂ.ನಟರಾಜ, ಕೆ.ಜೆ.ಹರಿಣಾಕ್ಷಿ ರಾಬಿನ್ ಹಾಗೂ ಲೋಕೇಶ್ ಭರಣಿ ಹಾಜರಿದ್ದರು.
ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ಎ.ಎಂ.ಪುಷ್ಪಕ್ ಕುಮಾರ್ ನಿರೂಪಿಸಿದರು. ಎಸ್.ಎಂ.ಅಂಕಿತ್ ಸ್ವಾಗತಿಸಿದರು. ಕೆ.ಎಸ್. ಜನನಿ ವಂದಿಸಿದರು.













