ಮಡಿಕೇರಿ ಜೂ.8 : ನಗರಸಭೆಯ ಆಡಳಿತ ವೈಫಲ್ಯದಿಂದ ಮಡಿಕೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ ಎಂದು ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ವರ್ಷ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ಪರಿಹಾರ ಸೂಚಿಸುವಲ್ಲಿ ನಗರಸಭೆಯ ಬಿಜೆಪಿ ಆಡಳಿತ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಕಾವೇರಿ ನದಿ ಹುಟ್ಟುವ ನಾಡು ಕೊಡಗು ಜಿಲ್ಲೆಯ ಹೃದಯ ಭಾಗದಲ್ಲಿರುವ ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನೀಡದೆ ನಿರ್ಲಕ್ಷಿಸಲಾಗಿದೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿರುವುದರಿಂದ ಇಂದು ನಗರಸಭೆ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆ ಕೇಂದ್ರದಲ್ಲಿ 300 ಹೆಚ್.ಪಿ ಸಾಮಥ್ರ್ಯದ ಎರಡು ಮೋಟರ್ ಇದ್ದು ಒಂದು ದುರಸ್ತಿಯಾದರೆ ಮತ್ತೊಂದನ್ನು ಉಪಯೋಗಿಸಬಹುದಾಗಿದೆ. ಆದರೆ ಕಳೆದ ವರ್ಷ ಒಂದು ಮೋಟಾರ್ ದುರಸ್ತಿಯಾಗಿದ್ದು, ಅಧಿಕಾರಿ ವರ್ಗ ಬಿಲ್ ಪಾವತಿಸದ ಕಾರಣ ಆ ಮೋಟಾರ್ ದುರಸ್ತಿ ಕಾಣದೆ ಮೂಲೆ ಗುಂಪಾಗಿದೆ ಎಂದು ಆರೋಪಿಸಿದ್ದಾರೆ.
ಕುಡಿಯುವ ನೀರು ಸರಬರಾಜಿನಂತಹ ಸೂಕ್ಷ್ಮ ವಿಚಾರ ನಿಭಾಯಿಸುವಲ್ಲಿ ಬಿಜೆಪಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದ್ದು, ಜನ ಸಂಕಷ್ಟ ಎದುರಿಸುವಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಜೇಶ್, ಸಮಸ್ಯೆಯ ಕುರಿತು ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಗಮನ ಸೆಳೆದಿರುವುದಾಗಿ ಹೇಳಿದ್ದಾರೆ.









