ಸುಂಟಿಕೊಪ್ಪ ಜೂ.8 : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಿರಂತರವಾಗಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಸುಂಟಿಕೊಪ್ಪ 1ನೇ ವಿಭಾಗದ ಜನತಾ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿದರು.
ನಂತರ ಮನೆಯ ನೀರು ತುಂಬಿಸಿರುವ ಡ್ರಾಮ್, ಪಾತ್ರೆ ಸೇರಿದಂತೆ ಸುತ್ತ ಮುತ್ತಲ್ಲ ಪ್ರದೇಶಗಳನ್ನು ಪರಿಶೀಲಿಸಿ ಟೈಯರ್, ತೆಂಗಿನ ಚಿಪ್ಪಿ ಹಾಗೂ ಗುಂಡಿಗಳಲ್ಲಿ ನೀರು ಶೇಖರಣೆಗೊಳ್ಳದಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಪ್ರಸ್ತುತ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಜನರು ಅತಂಕ್ಕೆ ಒಳಗಾಗದಂತೆ ಮನವಿ ಮಾಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್, ಸುಂಟಿಕೊಪ್ಪ ಪ್ರಾಥಮಿಕ ವೈದ್ಯಾಧಿಕಾರಿ ಡಾ. ಪ್ರಗತಿ, ಬಿಎಚ್‍ಇಓ (ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ)ಹೆಚ್.ಕೆ.ಶಾಂತಿ, ಹೇಲ್ತ್ ಇನ್ಸ್‍ಪೇಕ್ಟರ್‍ಗಳಾದ ಶೀನಿವಾಸ್, ಮುತ್ತುರಾಜ್, ಜನಾರ್ಧನ, ವಿಶ್ವಜ್ಞ, ಆರೋಗ್ಯ ಕಾರ್ಯಕರ್ತೆಯರು, ಸುಗಮಕಾರರು ಜ್ಯೋತಿ ಭಾಸ್ಕರ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.