ಮಡಿಕೇರಿ ಜೂ.9 : ಕೊಡಗು ವಿಶ್ವ ವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಪೊನ್ನಂಪೇಟೆ ತಾಲ್ಲೂಕಿನ ಕೋತೂರು ಆಶ್ರಮ ಶಾಲೆಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಅಧ್ಯಯನ ಶಿಬಿರದ ಮೂರನೇ ದಿನ ಬೊಮ್ಮಾಡು ಹಾಡಿಯ ನಿವಾಸಿಗಳಿಗೆ ಹಾಗೂ ಕೋತೂರು ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಹಾಡಿಯ ನಿವಾಸಿಗಳಿಗೆ ಹಾಗು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ , ವೈಕ್ತಿಯ ಸ್ವಚ್ಛತೆ ಮತ್ತು ಉತ್ತಮ ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು.
ನಂತರ ಮಾತನಾಡಿದ ಡಾ. ಅರ್ಚನಾ “ಆದಿವಾಸಿ ಸಮುದಾಯದಲ್ಲಿ ರಕ್ತ ಹೀನತೆ ಸಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಅವರ ಆರ್ಥಿಕ ಸ್ಥಿತಿಗೆ ಸ್ಥಳೀಯವಾಗಿ ಲಭ್ಯವಿರುವ ಹಣ್ಣು, ತರಕಾರಿ, ಸೊಪ್ಪುಗಳನ್ನು ನಿತ್ಯದ ಆಹಾರದಲ್ಲಿ ಸೇವಿಸಬೇಕು” ಎಂದು ತಿಳಿಸಿದರು.
ಹಿರಿಯ ಸುರಕ್ಷಣಾಧಿಕಾರಿ ಕಾವೇರಮ್ಮ ಮಾತನಾಡಿ, ಶಿಶು ಮರಣ ದರ ಹಾಗು ಮಾತೃ ಮರಣ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳು ಹಾಡಿಯ ಜನರಲ್ಲಿ ಅರಿವು ಮೂಡಿಸಲು ತಿಳಿಸಿದರು.
ತಾಲೂಕು ಕ್ಷಯರೋಗ ಮೇಲ್ವಿಚಾರಕರು ಮಾತನಾಡಿ, 2025 ರ ವೇಳೆಗೆ ಭಾರತವು ಕ್ಷಯರೋಗ ಮುಕ್ತವಾಗುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯುತ್ತಿದ್ದು, ಕ್ಷಯರೋಗದ ಲಕ್ಷಣಗಳು ಗೋಚರಿಸಿದಲ್ಲಿ ಅವರನ್ನು ಆಸ್ಪತ್ರೆಗೆ ಶಿಫಾರಸ್ಸು ಮಾಡಲು ತಿಳಿಸಿದರು.
ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ವಿ.ಎಸ್.ಪ್ರಶಾಂತ್ ಕುಮಾರ್ ಅಧ್ಯಕ್ಷತೆಯಲ್ಲಿ, ವಿರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಕಾಂತ್ , ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಉಪನ್ಯಾಸಕರಾದ ಲೋಕೇಶ್ ಭರಣಿ, ನಟರಾಜ, ಕೆ.ಹರಿಣಾಕ್ಷಿ, ಕೆ.ಜೆ.ರಾಬಿನ್ , ಆಶ್ರಮ ಶಾಲೆಯ ಶಿಕ್ಷಕರು, ಸಮಾಜ ಕಾರ್ಯ ಶಿಬಿರಾರ್ಥಿಗಳು, ಆಶ್ರಮ ಶಾಲೆಯ ವಿದ್ಯಾರ್ಥಿಗಳು, ಹಾಗೂ ಹಾಡಿಯ ನಿವಾಸಿಗಳು ಹಾಜರಿದ್ದರು.