ಮಡಿಕೇರಿ ಜೂ.9 : ಉಡೋತ್‍ಮೊಟ್ಟೆಯ ಶ್ರೀ ಆಧಿಶಕ್ತಿ ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಿತು.
ಜೂ.7ರ ಮುಂಜಾನೆಯಿಂದಲೇ ಆರಂಭಗೊಂಡು ಮಹಾಪ್ರಾರ್ಥನೆ ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಕಂಕಣ ಬಂಧನ, ಉಗ್ರಾಣ ಪೂಜೆ, ಸಂಜೆ ಕಳಶ ಮೆರವಣಿಗೆ ಹಾಗೂ ಹೊರೆಕಾಣಿಕೆ, ಬಿಂಬ ಶುದ್ಧಿ, ಆಧಿವಾಸ ಹೋಮ, ಪ್ರಸಾದ ಶುದ್ಧಿ ಹಾಗೂ ಮಹಾಪೂಜೆ ಜರುಗಿದವು.
ನಂತರ ಬಿಂಬದಲ್ಲಿ ತತ್ವನ್ಯಾಸ ಮತ್ತು ತತ್ವನ್ಯಾಸ ಹೋಮ, ಬಿಂಬ ಆಧಿವಾಸ ಪೂಜೆ, ಧಾನ್ಯಾದಿವಾಸ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಸಂಜೆ ಕಳಸ ಪ್ರತಿಷ್ಠೆ, ಕಳಶಾಧಿವಾಸ ಹೋಮ, ವಾಸ್ತು ರಾಕ್ಷೋಘ್ನ ಹೋಮ, ಬಿಂಬ ಶಯ್ಯಾದಿವಾಸ ಪೂಜೆ ನೆರವೇರಿತು.
ರಾತ್ರಿ ಮಕ್ಕಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಪ್ರತಿಷ್ಠಾ ಪ್ರಧಾನ ಹೋಮ, ದೇವಿಯ ಪುನರ್ ಪ್ರತಿಷ್ಠೆ, ದುರ್ಗಾಹೋಮ, ದೇವರಿಗೆ ಪ್ರಸನ್ನ ಪೂಜೆ, ಬ್ರಹ್ಮಕಲಶಾಭಿಷೇಕ ಸೇವೆಯ ಪೂಜೆಗಳು ಜರುಗಿತು.
ವಿವಿಧಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಮೂರುದಿನಗಳ ಕಾಲ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.










