ಮಡಿಕೇರಿ ಜೂ.9 : ವಿವಿಧ ಇಲಾಖೆಗಳಿಂದ ಪೂರ್ಣಗೊಂಡ ಕಾಮಗಾರಿಗಳ ಗುತ್ತಿಗೆದಾರರಿಗೆ ಹಾಗೂ ಎನ್‍ಡಿಆರ್‍ಎಫ್ ಯೋಜನೆಯ ಪೂರ್ಣಗೊಂಡ ಕಾಮಗಾರಿಗಳಿಗೆ ಹಣ ಪಾವತಿ ಮಾಡುವಂತೆ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.
ಸಂಘದ ಜಿಲ್ಲಾಧ್ಯಕ್ಷ ಕೆ.ಎ.ರವಿ ಚಂಗಪ್ಪ ಅವರ ನೇತೃತ್ವದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು ಹಾಗೂ ಗುತ್ತಿಗೆದಾರರು, ಪೂರ್ಣಗೊಂಡ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದಿರುವ ಬಗ್ಗೆ ಗಮನ ಸೆಳೆದರು.
ವಿವಿಧ ಲೆಕ್ಕ ಶೀರ್ಷಿಕೆಯಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಅಂದಾಜು ರೂ.40 ಕೋಟಿ ಲೋಕೋಪಯೋಗಿ ಇಲಾಖೆಯಲ್ಲಿ ರೂ.93 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ 30 ಕೋಟಿ ರೂ. ಗುತ್ತಿಗೆದಾರರಿಗೆ ಪಾವತಿ ಮಾಡಲು ಬಾಕಿ ಇದ್ದು, ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ತುರ್ತು ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರು ಅಸಹಾಯಕರಾಗಿದ್ದು, ತಕ್ಷಣ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಸಂಘದ ಜಿಲ್ಲಾ ಖಜಾಂಚಿ ಬಿ.ಕೆ.ರವೀಂದ್ರ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಪಿ.ರಾಜೀವ್ ಲೋಚನ, ಸದಸ್ಯ ಬಿ.ಆರ್.ಸದಾಶಿವ ರೈ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಲಾರೆನ್ಸ್, ಗುತ್ತಿಗೆದಾರರಾದ ಬಿ.ಎಸ್.ಡಾಲಿ, ಎಂ.ಎ.ಸಾಕಿಬ್, ಸಿ.ಆರ್.ಚಂದ್ರಕಾಂತ್, ಎಂ.ಕೆ.ಪೂಣಚ್ಚ, ಮತ್ತಿತರರು ಈ ಸಂದರ್ಭ ಹಾಜರಿದ್ದರು.









