ಮಡಿಕೇರಿ ಜೂ.9 : ಭಾಷೆಯ ಬದಲಾವಣೆಯು ಸಹಜ ಪ್ರಕ್ರಿಯೆ. ಕನ್ನಡ ಭಾಷೆಯ ಉಳಿವಿಗೆ ಪ್ರಾಚೀನತೆ ಹಾಗೂ ದಾಖಲೆಗಳು ಕಾರಣವಾಗಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಮುರಿಗೆಪ್ಪ ತಿಳಿಸಿದರು.
ಕೊಡಗು ವಿಶ್ವ ವಿದ್ಯಾನಿಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಆದಿಪುರಾಣವು ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತದೆ. ಪಂಪ, ರನ್ನ, ಪೊನ್ನ ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಾರೆ. ಪಂಪನು ತನ್ನ ಕಾವ್ಯಗಳಲ್ಲಿ ಬರುವ ಪುರಾಣ ಇತಿಹಾಸವನ್ನು ತಿಳಿಸಿದ್ದಾರೆ. ರಾಜ್ಯ ಸತ್ಯ, ಧರ್ಮ ಸತ್ಯ, ಕಾಲ ಸತ್ಯ ಮೌಲ್ಯವನ್ನು ತಿಳಿಸುತ್ತದೆ. ದೀರ್ಘಕಾಲದ ಇತಿಹಾಸವಿರುವ ಹಳೆಗನ್ನಡದ ಸೊಬಗನ್ನು ಗದುಗಿನ ವೀರನಾರಾಯಣ ಕೃತಿಯನ್ನು ದೇವಸ್ಥಾನದಲ್ಲಿ ಕುಳಿತು ರಚಿಸಲಾಗಿದೆ. ಇದು ನಮ್ಮ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ವಚನ ಪರಂಪರೆಯು ಸೀಮಿತವಾದುದಲ್ಲ ಒಂದು ದೀರ್ಘತೆಯುಳ್ಳ ಕ್ರಿಯೆ ಈ ಕ್ರಿಯೆಗಳಿಂದಲೇ ಮಾನವನ ಏಳಿಗೆ ಸಾಧ್ಯವಾಗುತ್ತದೆ. ಸತ್ಯ, ಶುದ್ಧ ಕೆಲಸ ಕಾರ್ಯವೆನಿಸಿಕೊಳ್ಳುತ್ತದೆ. ಸಾಮಾನ್ಯ ಮಹಿಳೆಯು ಕೂಡ ಸಮಾಜವನ್ನು ನಿರ್ಮಾಣ ಮಾಡ ಬಲ್ಲಳು. ಮಹಿಳೆಯರಿಗೆ ಬರೆಯುವ ಸ್ವಾತಂತ್ರ್ಯವನ್ನು ಭಾಷೆ ನೀಡಿದೆ. ಕನ್ನಡ ಭಾಷೆಯು ಜೀವಂತಿಕೆಯಾಗಿ ಉಳಿಯಲು ಸಾಕಷ್ಟು ಪುರಾವೆ ದಾಖಲೆಗಳಿವೆ. ಸಮುದಾಯದಲ್ಲಿ ನಡೆಯುವ ಆಗು-ಹೋಗುಗಳು, ಒಳಿತು ಕೆಡುಕುಗಳನ್ನು ದಾಖಲೀಕರಣ ಮಾಡಬೇಕು. ದಾಖಲೆಗಳಿಂದಲೇ ಕನ್ನಡವು ಜೀವಂತಿಕೆಯನ್ನು ಪಡೆದುಕೊಂಡಿದೆ ಎಂದು ಪ್ರೊ. ಮುರಿಗೆಪ್ಪ ಹೇಳಿದರು.
ಮದ್ರಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ..ಚೆ.ರಾಮಸ್ವಾಮಿ ಮಾತನಾಡಿ, ಕನ್ನಡದ ಪದಗಳು ವಿಶಿಷ್ಟ ಅರ್ಥಗಳನ್ನು ನೀಡುತ್ತವೆ. ಇಲ್ಲಿ ಧ್ವನಿ ಬದಲಾವಣೆಯು ತುಂಬಾ ಮುಖ್ಯ. ಕೆಲವೊಂದು ಸಂದರ್ಭದಲ್ಲಿ ಅಲ್ಪಪ್ರಾಣ, ಮಹಾಪ್ರಾಣದ ಮೇಲೆ ಕನ್ನಡ ನಿಂತಿದೆ ಎನ್ನುವುದು ಸತ್ಯದ ಸಂಗತಿಯಾಗಿದೆ. ಕನ್ನಡ ಭಾಷೆಯಲ್ಲಿ ಉಚ್ಛಾರಣೆಯು ಮುಖ್ಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.
ಧ್ವನಿ ಬದಲಾವಣೆಯಲ್ಲಿ ಒಂದೊಂದು ಪದಗಳು ಒಂದೊಂದು ಅರ್ಥ ನೀಡುವುದರಿಂದ ಕನ್ನಡವನ್ನು ದ್ವನಿ ಉಚ್ಚಾರಣೆಯ ಮೂಲಕ ಗುರುತಿಸುವುದು ಎಂದರೂ ತಪ್ಪಾಗಲಾರದು. ಕನ್ನಡವನ್ನು ಬೆಳೆಸಿರುವುದು ಉಳಿಸಿರುವುದು ಅಭಿವೃದ್ಧಿಪಡಿಸಿರುವುದು ಬಸವಣ್ಣ ಹಾಗೂ ಅಲ್ಲಮ ಪ್ರಭು. ಇವರ ಭಾಷೆಯು ಸುಲಭವಾಗಿ ಸರಳವಾಗಿ ಸಾಮಾನ್ಯ ಜನರಿಗೆ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ. ಭಾಷಾ ಸಾಮಥ್ರ್ಯ, ಭಾಷಾ ಅಭಿವ್ಯಕ್ತಿಯ ಕಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಚೆ.ರಾಮಸ್ವಾಮಿ ತಿಳಿಸಿದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ ಮಾತನಾಡಿ, ಕನ್ನಡ ಪ್ರಾಚೀನತೆ ಹಿರಿಮೆ ಶಾಸನ ಸಾಹಿತ್ಯಗಳು ಕನ್ನಡಕ್ಕೆ ಅದರದೇ ಆದ ಕೊಡುಗೆಯನ್ನು ನೀಡಿದೆ. ಕವಿರಾಜಮಾರ್ಗ, ಹಲ್ಮಿಡಿ ಶಾಸನ, ವಡ್ಡಾರಾಧನೆ ಇಂತಹ ಕೃತಿಗಳು ಕನ್ನಡಕ್ಕೆ ಮೆರುಗು ತಂದಿದೆ. ಹಾಗೂ ಕನ್ನಡ ವಿಭಾಗ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳುವ ಮೂಲಕ ಬಹಳ ದೊಡ್ಡ ಕೊಡುಗೆಯನ್ನು ನೀಡಿದೆ. ಇಂತಹ ವಿಚಾರ ಸಂಕಿರಣದಿಂದ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ವಿಭಾಗದ ಅಧ್ಯಾಪಕರು ಹಾಗೂ ಸಂಚಾಲಕ ಡಾ.ಕರುಣಾಕರ ಎನ್.ವಿ, ಸಂಯೋಜಕ ಪ್ರೊ.ತಿಪ್ಪೇಸ್ವಾಮಿ, ಇತರರು ಹಾಜರಿದ್ದರು.









