ಮಡಿಕೇರಿ ಜೂ.9 : ನರೇಗಾ ಕಾರ್ಮಿಕರಿಗೆ ಸ್ಥಳದಲ್ಲೇ ಆರೋಗ್ಯ ಖಾತ್ರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೆಎಚ್‍ಪಿಟಿ ಸಂಸ್ಥೆ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ `ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನವು ಈಗಾಗಲೇ ಆರಂಭವಾಗಿದ್ದು, ಜೂನ್ 22 ರವರೆಗೆ ನಡೆಯಲಿದೆ. ಈಗಾಗಲೇ ಆರೋಗ್ಯ ಶಿಬಿರದ ಮೂಲಕ, ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ ಯಶಸ್ವಿಯಾಗಿ ಜನರನ್ನು ತಲುಪುತ್ತಿದೆ.
ಗ್ರಾಮೀಣ ಮಟ್ಟದ ಜನರ ಆರೋಗ್ಯವನ್ನು ಕಾಪಾಡುವುದು, ಹಾಗೂ ಸುಲಭವಾಗಿ ಆರೋಗ್ಯ ಸೇವೆಯನ್ನು ಪಡೆಯುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಅದರ ಸಲುವಾಗಿ ಆಶಾ ಕಾರ್ಯಕರ್ತರಿಗೂ ತರಬೇತಿ ನೀಡಲಾಗಿದೆ. ಗ್ರಾ.ಪಂ ಕಚೇರಿ ಅಥವಾ ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದ್ದು, ವಯಸ್ಕರಿಂದ ವೃದ್ಧರವರೆಗೂ ಉಚಿತ ತಪಾಸಣೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಇದುವರೆಗೆ 57 ಗ್ರಾ.ಪಂ ಗಳಲ್ಲಿ ಶಿಬಿರ ಆಯೋಜನೆ ಮಾಡಿದ್ದು, ಸುಮಾರು 5495 ರಷ್ಟು ಜನರು ಆರೋಗ್ಯ ತಪಾಸಣೆಯನ್ನು ಮಾಡಿಕೊಂಡಿದ್ದಾರೆ.
ಆರೋಗ್ಯ ಕಿಟ್ ವಿತರಣೆ ತಪಾಸಣೆ ಮತ್ತು ಪರೀಕ್ಷೆ ಕಿಟ್ ಗಳು ಸೇರಿದಂತೆ ತಾಂತ್ರಿಕ ಸಲಕರಣೆಗಳನ್ನು ಒಳಗೊಂಡ ಆರೋಗ್ಯ ನಿರ್ವಹಣಾ ಕಿಟ್ ಅನ್ನು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ವಿತರಣೆ ಮಾಡಲಾಗಿದೆ. ಇದರಲ್ಲಿ ರಕ್ತದ ಒತ್ತಡದ ಮಾನಿಟರ್, ಹಿಮೋಗ್ಲೋಬಿನೋ ಮೀಟರ್, ಗ್ಲುಕೋ ಮೀಟರ್, ತೂಕದ ಯಂತ್ರ ಮತ್ತು BMI ಚಾರ್ಟ್, ಪಲ್ಸ್ ಆಕ್ಸಿಮೀಟರ್, ಇನ್ ಫ್ರಾರೆಡ್ ಥರ್ಮಾಮೀಟರ್ ಮತ್ತು MUAC ಟೇಪ್ ಸೇರಿದೆ. ಮುಂಚೂಣಿ ಕಾರ್ಯಕರ್ತರು ಮತ್ತು ಆರೋಗ್ಯ ಆರೈಕೆ ಸೌಲಭ್ಯ ನೀಡುವ ಸಿಬ್ಬಂದಿ ನೆರವಿನೊಂದಿಗೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.
ಲಭ್ಯವಿರುವ ಪರೀಕ್ಷೆಗಳು : ಆರೋಗ್ಯ ಶಿಬಿರದ ಮೂಲಕ ರಕ್ತದೊತ್ತಡ, ಮಧುಮೇಹ, ರಕ್ತದ ಕೊರತೆ, ಅಪೌಷ್ಟಿಕತೆ ಸೇರಿದಂತೆ ಇತರೆ ಪರೀಕ್ಷೆಯನ್ಬು ಕೈಗೊಂಡು ಅಗತ್ಯ, ಸಲಹೆ ಸೂಚಿಸಿ ಮಾತ್ರೆಗಳನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಹೊರೆಯನ್ನು ತಪ್ಪಿಸಿ ಎಲ್ಲರಿಗೂ ಆರೋಗ್ಯ ಭಾಗ್ಯ ದೊರೆಕಿದೆ.









