ವಿರಾಜಪೇಟೆ ಜೂ.10 : ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ತಪ್ಪಡಕ ಕಟ್ಟುವುದರೊಂದಿಗೆ ಉದ್ಘಾಟಿಸಿದರು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಎಲ್ಲರೂ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯೊಂದಿಗೆ ಜೀವನ ಸಾಗಿಸಬೇಕು ಹಾಗೂ ಜೀವಿತಾವಧಿಯಲ್ಲಿ ಆದಷ್ಟು ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥ ಪೂರ್ಣಗೊಳಿಸಬೇಕೆಂದು ಕಿವಿಮಾತು ಹೇಳಿದರು.
ತಾನು ಜಾನಪದ ಕಲಾ ಪ್ರಕಾರವಾದ ಉಮ್ಮತಾಟ್ ಕಲಾ ಪ್ರಕಾರವನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ನಿರಂತರವಾಗಿ ಮಾಡಲಿದ್ದೇನೆ ಎಂದು ನುಡಿದರು. ಉಮ್ಮತ್ತಾಟ್ ಕಲಾ ತಂಡವನ್ನು ಕಟ್ಟಿಕೊಂಡು ಮಕ್ಕಳಿಗೆ ಕಲೆಯನ್ನು ಕಲಿಸಿ ದೇಶದೆಲ್ಲೆಡೆ ಕರೆದುಕೊಂಡು ಹೋಗಿ ಅನೇಕ ಬಾರಿ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಿದ್ದೇನೆ. ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಣಿ ಮಾಚಯ್ಯ ಪ್ರಶಸ್ತಿ ಪಡೆದಿರುವುದು ಪ್ರತಿಯೊಬ್ಬ ಮಹಿಳೆಯರಿಗೂ ಸ್ಪೂರ್ತಿ ತುಂಬಿದೆ. ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಛಲ ಮೂಡಿಸಿದೆ. ಅಂತೆಯೇ ನಮ್ಮ ಹೆಣ್ಣು ಮಕ್ಕಳು, ಮಹಿಳೆಯರು ತಮ್ಮ ಜೀವನವನ್ನು ಕೇವಲ ಅಡುಗೆಮನೆಗಷ್ಟೇ ಸೀಮಿತಗೊಳಿಸದೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಕರೆ ನೀಡಿದರು.
ಯುವಜನತೆ ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಯಂದಿರಿಗಿದೆ. ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಪ್ರತಿ ಪೋಷಕರ ಜವಾಬ್ದಾರಿ. ಅವರಿಗೆ ನಮ್ಮ ಸಂಸ್ಕøತಿ ಆಚಾರ ವಿಚಾರಗಳನ್ನು ಕಲಿಸಿಕೊಡುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭ ಒಕ್ಕೂಟದ ಸದಸ್ಯೆಯರಿಗೆ “ಕೊಡವ ಮದುವೆಯಲ್ಲಿ ಕೊಡವ ಹೆಣ್ಣುಮಕ್ಕಳ ವೇಷ ಭೂಷಣ ಹೇಗೆ ಇದ್ದರೆ ಚೆಂದ” ಎಂಬ ವಿಚಾರದ ಬಗ್ಗೆ ಚರ್ಚಾ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನಾಯಕಂಡ ಬೇಬಿ ಚಿಣ್ಣಪ್ಪ, ದ್ವಿತೀಯ ತಾತಂಡ ಪ್ರಭಾ ನಾಣಯ್ಯ, ತೃತೀಯ ಪೆಮ್ಮಂಡ ಗೀತಾ ಪವಿತ್ರ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ತಾತಂಡ ಜ್ಯೋತಿ ಪ್ರಕಾಶ್ ಒಕ್ಕೂಟಕ್ಕೆ ನೀಡಿದ ದತ್ತಿನಿಧಿಯನ್ನು ಖಜಾಂಚಿ ತಾತಂಡ ಯಶು ಕಭೀರ್ ಪಡೆದುಕೊಂಡರು.
ವಿಜೇತರಿಗೆ ಬಹುಮಾನವನ್ನು ಅತಿಥಿ ರಾಣಿ ಮಾಚಯ್ಯ ನೀಡಿದರು
ತಾತಂಡ ಜ್ಯೋತಿ ಪ್ರಕಾಶ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರ ವ್ಯಕ್ತಿ ಪರಿಚಯವನ್ನು ಮಾಡಿದರು.
ಒಕ್ಕೂಟದ ಸದಸ್ಯೆ ಉದ್ದಪಂಡ ವಿಮಲಾ ಪ್ರಾರ್ಥಿಸಿದರು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಸ್ವಾಗತಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಹಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಖಜಾಂಚಿ ತಾತಂಡ ಯಶು ಕಭೀರ್, ಸಲಹಾ ಸಮಿತಿ ಸದಸ್ಯೆ ಬಿದ್ದಂಡ ರಾಣಿ ಉತ್ತಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ ಹಾಜರಿದ್ದರು.









