ಮಡಿಕೇರಿ ಜೂ.10 : ಆಧುನೀಕರಣದಿಂದ ಹಿಂದಿನ ಅರ್ಥಪೂರ್ಣ ಆಚರಣೆಯನ್ನು ಕೈ ಬಿಟ್ಟು ಇಂದು ಹೊಸ ಹೊಸ ಆಚರಣೆಗೆ ಮಾರುಹೋಗುತ್ತಿದ್ದಾರೆ. ಇದು ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ತಿಳಿಸಿದ್ದಾರೆ.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬದ ಪ್ರಯುಕ್ತ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಕೊಡವಾಮೆ ಸಂಘಟನೆ ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ “ಕೊಡವ ಸಂಸ್ಕೃತಿ -ವಿಚಾರ ಗೋಷ್ಠಿ” ಹಾಗೂ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ “ಭಾವ ಕುಸುಮ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
“ಮರ್‍ಂದ್ ಮರೆಯಾನ ಕೊಡವ ನಡ್‍ಪ್ ಕೊಡ್‍ಪ್” ವಿಷಯವಾಗಿ ಮಾತನಾಡಿದ ರಾಣು ಅಪ್ಪಣ್ಣ, ಕೊಡವ ಸಂಸ್ಕೃತಿಯ ಆಚರಣೆ ಇಂದು ಕಡಿಮೆಯಾಗುತ್ತಿರುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕೊಡವ ಸಂಸ್ಕೃತಿಯಲ್ಲಿ ಹಿಂದೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದ ಪ್ರಕೃತಿ ಪೂಜೆ, ಭೂಮಿ ಪೂಜೆ, ವಿವಾಹ ಪದ್ಧತಿ ಸೇರಿದಂತೆ ವಿವಿಧ ಆಚರಣೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಮತ್ತೋರ್ವ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ “ಲೋಕ ಮೆಚ್ಚ್‍ನ ಕೊಡವ ಸಂಸ್ಕೃತಿ ” ಎಂಬ ವಿಷಯದ ಕುರಿತು ಮಾತನಾಡಿ, ಪರಿಸರ ಸಂರಕ್ಷಣೆ ಕೊಡವರ ಒಂದು ಸಂಸ್ಕೃತಿಯಾಗಿದೆ. ಕೊಡವ ಭಾಷೆ ಮತ್ತು ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದದ್ದು, ಹಲವು ಹೊರದೇಶದ ಅಧ್ಯಯನಕಾರರು ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ ಹಾಗೂ ಭಾಷೆಯನ್ನು ಮೆಚ್ಚಿಕೊಳ್ಳುವುದರ ಜೊತೆಗೆ ವಿಭಿನ್ನವಾಗಿ ಹೋಗಳಿದ್ದಾರೆ. ಸಂಸ್ಕೃತಿ ಎಂದರೆ ನಮ್ಮ ಪೂರ್ವಿಕರು ಬಿಟ್ಟುಹೋದ ಒಂದು ಜ್ಯೋತಿ. ಅದನ್ನು ಅರಿತು ಕೊಡವರು ತಮ್ಮ ಸಂಸ್ಕೃತಿಯನ್ನು ಪಾಲನೆ ಮಾಡಬೇಕು. ಅಲ್ಲದೇ ಕೊಡಗು, ಕೊಡವಾಮೆ, ಭಾಷೆಯ ಏಳಿಗೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕೊಡವಾಮೆ ಕೂಟದ ಅಧ್ಯಕ್ಷ ಉದಿಯಂಡ ರೋಷನ್ ಸೋಮಯ್ಯ ಮಾತನಾಡಿ, ಸಂಘಟನೆ ವತಿಯಿಂದ ಆಟ್, ಪಾಟ್, ಪಡಿಪು ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕೊಡವ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಅಲ್ಲದೇ ದೇಶಕ್ಕಾಗಿ ಹೋರಾಡಿದ ಕೊಡಗಿನ ವೀರ ಯೋಧರ ಪುಸ್ತಕವನ್ನು ಹೊರತರಲು ನಿರ್ಧರಿಸಿದ್ದು, ವಾಟ್ಸಪ್ ಮೂಲಕ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಕೊಡವ ಡಿಕ್ಸನರಿ ಹಾಗೂ ಕೊಡವ ಡಿಜಿಟಲ್ ಲೈಬ್ರರಿಯನ್ನು ತೆರೆಯಲು ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಹಾಸನದ ಡಿ.ಸಿ.ಸಿ ಬ್ಯಾಂಕ್‍ನ ನಿವೃತ್ತ ನಿರ್ದೇಶಕರು ಹಾಗೂ ಸಾಹಿತಿ ಎನ್.ಎಲ್.ಚನ್ನೇಗೌಡ ಮಾತನಾಡಿ, ನಮ್ಮ ಸಂಸ್ಕೃತಿ ಉಳಿದಿರುವುದು ಜಾನಪದದಲ್ಲಿ. ಸಂಸ್ಕೃತಿ ಯನ್ನು ಆಳವಾಗಿ ಅಧ್ಯಯನ ಮಾಡಲು ಪ್ರಬಂಧ ಅಗತ್ಯ. ಅದನ್ನು ಪುಸ್ತಕ ರೂಪದಲ್ಲಿ ಹೊರತಂದರೆ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಭಾವ ಕುಸುಮ” ಕವನ ಸಂಕಲನ ವಿಭಿನ್ನವಾಗಿದೆ. ಕೊಡವ ಸಂಸ್ಕೃತಿಯ ವೈವಿದ್ಯವನ್ನು ಕವನದ ಮೂಲಕ ಪುಸ್ತಕದಲ್ಲಿ ಅರ್ಥೈಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ, ಕೊಡವ ಮಕ್ಕಡ ಕೂಟ ಹಲವು ಜಾಗೃತಿ ಕಾರ್ಯಕ್ರಮದ ಮೂಲಕ ಕೊಡವ ಭಾಷೆ, ಆಚಾರ, ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ನಡೆಸುತ್ತಿದ್ದು, ಹೊಸ ಪ್ರತಿಭೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮಚ್ಚಾಮಾಡ ಲಾಲ ಕುಟ್ಟಪ್ಪ ಪ್ರಾಸ್ತವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಬರೆದ, ಕೊಡವ ಮಕ್ಕಡ ಕೂಟದ ಪ್ರಕಟಿತ 65ನೇ ಪುಸ್ತಕ “ಭಾವ ಕುಸುಮ” ಕವನ ಸಂಕಲವನ್ನು ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ. ಬಿ. ಅಯ್ಯಪ್ಪ ಉಪಸ್ಥಿತರಿದ್ದರು.
ಕೊಕ್ಕಲೆರ ಧರಣಿ ಸೋಮಣ್ಣ ಪ್ರಾರ್ಥಿಸಿದರು, ಅಜ್ಜಮಕ್ಕಡ ವಿನು ಕುಶಾಲಪ್ಪ ನಿರೂಪಿಸಿದರು. ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಸರ್ವರನ್ನು ವಂದಿಸಿದರು.








