ಮಡಿಕೇರಿ ಜೂ.12 : ಮುಂದಿನ ಜನಾಂಗಕ್ಕೆ ಒಳ್ಳೆಯ ವಾತಾವರಣ, ಸಂಸ್ಕಾರ ಜೀವನವನ್ನು ನೀಡುವ ದೂರದೃಷ್ಟಿ ಮತ್ತು ಆಶಯದೊಂದಿಗೆ ಸಿದ್ದಾಪುರದಲ್ಲಿ ದಶಲಕ್ಷ್ಮಿ ಹೋಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕೊಡಗಿನ ಪರಿಸರ ಮತ್ತು ಜನಜೀವನದ ಸರ್ವೋತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಣ್ಣೂರಿನ ಋಷಿದೇವ್ ಪ್ರತಿಷ್ಠಾನದ ಮುಖ್ಯಸ್ಥ ಸದ್ಗುರು ನರೇಂದ್ರನ್ ಗುರೂಜಿ ಅವರ ಉಪಸ್ಥಿತಿಯಲ್ಲಿ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ದಶಲಕ್ಷ್ಮಿ ಹೋಮ ನಡೆಯಿತು.
ಮಾರ್ಚ್ 26 ರಂದು ನಡೆದ ಯಾಗ ಮತ್ತು ಹೋಮಗಳ ಪ್ರಾಮುಖ್ಯತೆ ಮುಂದಿನ ಜನಾಂಗಕ್ಕೆ ನಮ್ಮ ಜವಬ್ಧಾರಿ ಏನು ಎಂಬುದರ ಕುರಿತು ಆಧ್ಯಾತ್ಮಿಕ ಸಮಾಲೋಚನೆಯ ಮುಂದುವರಿದ ಭಾಗವಾಗಿ ಶ್ರೀ ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ, ಧನಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಆರೋಗ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಸಿದ್ಧಿ ಲಕ್ಷ್ಮಿ, ಮೋಕ್ಷಲಕ್ಷ್ಮಿ, ಧೈರ್ಯಲಕ್ಷ್ಮಿ, ನಾಗಲಕ್ಷ್ಮಿ ಒಳಗೊಂಡ ದಶಲಕ್ಷ್ಮಿ ಹೋಮ ನಡೆಯಿತು.
ಇದೇ ಸಂದರ್ಭ ಕಳೆದ 25 ವರ್ಷಗಳಿಂದ ಸಾಂಸಾರಿಕವಾಗಿದ್ದು, ಆಧ್ಯಾತ್ಮಿಕದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದ ಬೆಂಗಳೂರಿನ ಶಾರದಾ ಶ್ರೀಧರ್ ಅವರ ಸಾಧನೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸನ್ಮಾನ ಸ್ವೀಕರಿಸಿ, ಮಾತನಾಡಿದ ಶಾರದಾ ಶ್ರೀಧರ್, ನನಗೆ ನೀಡಿದ ಸನ್ಮಾನಕ್ಕೆ ಅಭರಿಯಾಗಿದ್ದೇನೆ. ಇದು ಗುರು ಕೃಪೆಯ ಅಂಶವಾಗಿದದು, ಮುಂದಿನ ದಿನಗಳಲ್ಲಿ ನನ್ನ ಕೈಲಾದಷ್ಟು ಸೇವೆಯನ್ನು ಮಾಡಿಕೊಂಡು ಹೋಗುವುದಾಗಿ ತಿಳಿಸಿದರು.
ಹೋಮದ ಫಲಶ್ರುತಿ ಹಾಗೂ ವಾತಾವರಣ ಮತ್ತು ವ್ಯಕ್ತಿಗಳ ಮೇಲೆ ಬೀರಿದ ಪರಿಣಾಮಗಳ ಪ್ರಭಾವವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಬಂದಿದ್ದ ಅಂತರಾಷ್ಟ್ರೀಯ ಜಲವಿಜ್ಞಾನಿ ಶ್ರೀ ಕೃಷ್ಣ ಮಾದಪ್ಪರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಸಂಚಾಲಕಿ ನಡಿಕೇರಿಯಂಡ ಸ್ವಾತಿ ಮಂದಣ್ಣ ಉಪಸ್ಥಿತರಿದ್ದರು.










