ವಿರಾಜಪೇಟೆ ಜೂ.12 : ದೇಶದ ಇತಿಹಾಸದಲ್ಲೇ ಸರಕಾರ ರಚನೆಯಾಗಿ 21 ದಿನಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಮೂಲಕ ವಿರಾಜಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕರ್ನಾಟಕ ಸರಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪೊನ್ನಣ್ಣ, ಮಹಿಳೆಯರಿಗೆ ಉಚಿತವಾಗಿ ರಾಜ್ಯದಾದ್ಯಂತ ಪ್ರಯಾಣ ಮಾಡಲು ರಾಜ್ಯದಲ್ಲಿ ಏಕಕಾಲಕ್ಕೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಚುನಾವಣೆಗೂ ಮುನ್ನ ಕೊಟ್ಟಂತಹ ಎಲ್ಲಾ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಐದು ಗ್ಯಾರಂಟಿಗಳಲ್ಲಿ ಮೊದಲನೆ ಗ್ಯಾರಂಟಿ ಫಲಿಸಿದೆ ಎಂದರು.
ಮಹಿಳೆಯರನ್ನು ಬಲಪಡಿಸುವುದು, ಸದೃಢಗೊಳಿಸುವುದು ಸಂವಿಧಾನದ ಆಶಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಈ ಯೋಜನೆ ಜಾರಿಗೆ ತಂದಿದ್ದಾರೆ. ಇದು ಎಲ್ಲಾ ಮಹಿಳೆಯರಿಗೆ ಸದುಪಯೋಗವಾಗಲಿ, ನಾಡಿನ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.
ವಿರಾಜಪೇಟೆ ಪ.ಪಂ ಆಡಳಿತ ಅಧಿಕಾರಿ, ಸಹಾಯಕ ಆಯುಕ್ತ ಉತೀಶ್ ಉಲ್ಲಾಳ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಪುತ್ತೂರು ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಆಶಾಲತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ಪಡೆಯಲು ಅವಕಾಶವಿದೆ. ಸ್ಮಾರ್ಟ್ ಕಾರ್ಡ್ ಪಡೆಯುವವರಿಗೆ ಯಾವುದಾದರೊಂದು ಮನೆ ವಿಳಾಸ, ಭಾವಚಿತ್ರ ಇರುವ ಗುರುತಿನ ಚೀಟಿ ಅನ್ನು ತೆಗೆದುಕೊಂಡು ಹೋಗಬೇಕು, ವೋಟರ್ ಐಡಿ, ವಾಹನ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಸರ್ಕಾರದ ಯಾವುದೇ ಗುರುತಿನ ಚೀಟಿಗಳಲ್ಲಿ ಒಂದನ್ನು ಪ್ರಯಾಣ ಮಾಡುವಾಗ ಹೊಂದಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ, ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜ್ಯೂನಿಯರ್ ಇಂಜಿನಿಯರ್ ಶರತ್, ಸಹಾಯಕ ಸಂಚಾರ ಅಧೀಕ್ಷಕ ಇರ್ಷಪ್ಪ ಹಾಗೂ ಸಿಬ್ಬಂದಿವರ್ಗ, ಕಾಂಗ್ರೆಸ್ ಪ್ರಮುಖರು, ಮಹಿಳೆಯರು ಹಾಜರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಮೂಲಕ ಶಾಸಕ ಪೊನ್ನಣ್ಣ ಅವರು ಚಾಲನೆ ನೀಡಿ ಶುಭ ಹಾರೈಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ